ಮಗಳ ಹುಟ್ಟುಹಬ್ಬದ ಮುನ್ನವೇ ತಂದೆ ಸಾವಿಗೆ ಬಲಿ – ಬಂಟ್ವಾಳದಲ್ಲಿ ದುರ್ಘಟನೆ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನಲ್ಲಿ ರಾತ್ರಿ ಸಂಭವಿಸಿದ ಎರಡು ಬೈಕ್‌ಗಳ ನಡುವಿನ ಭೀಕರ ಅಪಘಾತದಲ್ಲಿ ಪ್ರತಿಭಾವಂತ ಯುವ ಛಾಯಾಗ್ರಾಹಕರೊಬ್ಬರು ದುರ್ಮ*ಣಕ್ಕೀಡಾಗಿದ್ದಾರೆ. ಶಂಭೂರು ನಿವಾಸಿಯಾದ ರಕ್ಷಿತ್ ಶೆಟ್ಟಿ (43) ಮೃ*ಪಟ್ಟ ದುರ್ದೈವಿ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

ಬಂಟ್ವಾಳ ವಲಯದ ಛಾಯಾಗ್ರಾಹಕ ಸಂಘದ ಸಕ್ರಿಯ ಸದಸ್ಯರಾಗಿದ್ದ ರಕ್ಷಿತ್ ಶೆಟ್ಟಿ ಅವರು ವೃತ್ತಿಯಲ್ಲಿ ಅತ್ಯುತ್ತಮ ವಿಡಿಯೋಗ್ರಾಫರ್ ಆಗಿ ಗುರುತಿಸಿಕೊಂಡಿದ್ದರು. ಇಡೀ ಘಟನೆಯಲ್ಲಿ ಅತ್ಯಂತ ನೋವಿನ ಸಂಗತಿಯೆಂದರೆ, ನಾಳೆ ಅಂದರೆ ಮಾರ್ಚ್ 15ರಂದು ರಕ್ಷಿತ್ ಅವರ ಮಗಳ 10ನೇ ವರ್ಷದ ಹುಟ್ಟುಹಬ್ಬವಿತ್ತು. ಮಗಳ ಜನ್ಮದಿನದ ಸಂಭ್ರಮಕ್ಕೆ ಮನೆಯಲ್ಲಿ ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದಾಗಲೇ ವಿಧಿಯಾಟ ತಂದೆಯ ಪ್ರಾಣವನ್ನು ಕಸಿದುಕೊಂಡಿದೆ. ಸಂಭ್ರಮಿಸಬೇಕಿದ್ದ ಮನೆಯಲ್ಲಿ ಈಗ ಆಕ್ರಂದನ ಮುಗಿಲು ಮುಟ್ಟಿದೆ.

ರಕ್ಷಿತ್ ಅವರ ಕುಟುಂಬವು ಈಗಾಗಲೇ ಹಲವಾರು ಕಷ್ಟಗಳನ್ನು ಎದುರಿಸುತ್ತಿದೆ. ಇವರ ಸಹೋದರ ರಂಜಿತ್ ಅವರು ಕೂಡ ಕೆಲವು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಹಾಸಿಗೆ ಹಿಡಿದಿದ್ದಾರೆ. ಈಗ ಮನೆಯ ಆಧಾರಸ್ತಂಭವಾಗಿದ್ದ ರಕ್ಷಿತ್ ಅವರ ಸಾವಿನಿಂದ ಆ ಬಡ ಕುಟುಂಬವು ದಿಕ್ಕುತೋಚದಂತಾಗಿದೆ. ಅಪಘಾತದ ಕುರಿತು ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!