ಮಂಗಳೂರು:ರೈತ ಕುಡ್ಲ ಪ್ರತಿಷ್ಠಾನ ನೇತೃತ್ವದಲ್ಲಿ ಕದ್ರಿ ಉದ್ಯಾನವನ ದಲ್ಲಿ ಅಕ್ಟೋಬರ್ 17ರಿಂದ 19 ವರೆಗೆ “ಕದ್ರಿ ಸಸ್ಯೋತ್ಸವ -ರೈತ ಮೇಳ” ಕಾರ್ಯಕ್ರಮವು
ಬೆಳಗ್ಗೆ 8ರಿಂದ ರಾತ್ರಿ 8ವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ರೈತ ಕುಡ್ಲ ಪ್ರತಿಷ್ಠಾನದ ಅಧ್ಯಕ್ಷರಾದ ಭರತ್ ರಾಜ್ ಸೊರಕೆ ತಿಳಿಸಿದರು .
ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಅಕ್ಟೋಬರ್ 17ರಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ದರ್ಶನ್ ಕೆ.ವಿ. ಕಾರ್ಯಕ್ರಮ ಉದ್ಘಾಟಿಸಲ್ಲಿದ್ದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರ್ವಡೆ ವಿನಾಯಕ ಕಾರ್ಭಾರಿ ರೈತ ಕುಡ್ಲ ಗೌರವ ಪ್ರಶಸ್ತಿಯನ್ನು ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಮುರುವ ನಿವಾಸಿ, ಕಾಯಕವನ್ನೇ ಉಸಿರಾಗಿಸಿಕೊಂಡ ಕರ್ಮಯೋಗಿ, ಬೇಸಾಯ ಹಾಗೂ ಮನೆಯ ಖರ್ಚಿಗಾಗಿ ನೀರಿನ ಸಮಸ್ಯೆ ಎದುರಾದಾಗ ಸುರಂಗಗಳನ್ನು ಕೊರೆದು ಜಲ ಸಂಗ್ರಹಿಸಿದ ಸಾಧಕ. ಭತ್ತ, ಅಡಕೆ, ತರಕಾರಿ ಬೆಳೆಯುತ್ತಿರುವ 71 ವರ್ಷದ ಕಾಯಕ ಯೋಗಿ ರೈತ ಜಾನ್ ಮೊಂತೇರೊ ಅವರಿಗೆ ಪ್ರಧಾನ ಮಾಡಲಿರುವರು ಎಂದರು .
ಈ ಸಂದರ್ಭದಲ್ಲಿ ಮಂಗಳೂರು ಮಹಾ ನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಮಂಗಳೂರು ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಎಸ್. ಮರಿಯಪ್ಪ ಸಹಿತ ಹಲವು ಗಣ್ಯರು ಉಪಸ್ಥಿತರಿರುವರು ಎಂದರು .
ಸಸ್ಯೋತ್ಸವದ ಬಗ್ಗೆ ಮಾಹಿತಿಯನ್ನು ನೀಡುತ್ತಾ, ನರ್ಸರಿ ಸಂಸ್ಥೆ ಗಳಿಂದ ಹೂವು, ಅಲಂಕಾರಿಕಾ ಸಸ್ಯಗಳ ಪ್ರದರ್ಶನ ಮಾರಾಟ ಇರಲಿದೆ. ತರಕಾರಿ, ಹಣ್ಣಿನ ಗಿಡಗಳು, ಒಳಾಂಗಣ ಸಸ್ಯ, ಕೈತೋಟ ನಿರ್ಮಾಣಕ್ಕೆ ಪೂರಕ ಗೊಬ್ಬರ, ಯಂತ್ರಗಳು, ಬೀಜಗಳು, ತರಕಾರಿ ಗಿಡಗಳು, ಗ್ರೋ ಬ್ಯಾಗ್ ಮಾರಾಟವಿರಲಿದೆ. ಕಸಿ ಕಟ್ಟುವ ಬಗ್ಗೆ ಉಚಿತ ತರಬೇತಿ ಕಲ್ಪಿಸಲಾಗಿದೆ ಎಂದರು .
ವಿಶೇಷ ಆಕರ್ಷಣೆಯಾಗಿ ಮಣ್ಣಿನ ಮಡಿಕೆ ತಯಾರಿ, ಹಣತೆ ತಯಾರಿ ಪ್ರಾತ್ಯಕ್ಷಿಕೆ, ಬುಟ್ಟಿ ಹೆಣೆಯುವ ಪ್ರಾತ್ಯಕ್ಷಿಕೆ, ಕೈಮಗ್ಗದಿಂದ ಸೀರೆ ತಯಾರಿ ಪ್ರಾತ್ಯಕ್ಷಿಕೆ ಇರಲಿದೆ. ನಗರ ಜೇನುಕೃಷಿಗೆ ಪೂರಕವಾಗಿ ಜೇನುಕೃಷಿ ಮಾಹಿತಿ, ಸ್ಥಳೀಯ ರೈತೋದ್ಯಮಿಗಳು ತಯಾರಿಸಿದ ಉತ್ಪನ್ನಗಳ ಮಾರಾಟ, ಖಾದಿ ಉತ್ಪನ್ನಗಳ ಮಾರಾಟ ಏರ್ಪಡಿಸಲಾಗಿದೆ. ದೀಪಾವಳಿ ಹಬ್ಬಕ್ಕೆ ಅಗತ್ಯವಾದ ಮಣ್ಣಿನ ಹಣತೆ, ಗೂಡುದೀಪ, ಅಲಂಕಾರಿಕ ವಸ್ತುಗಳು ಲಭ್ಯವಿರಲಿದೆ . ಪಾರ್ಕ್ ನಲ್ಲಿ ಶುಕ್ರವಾರ ಮತ್ತು ಶನಿವಾರ ರಕ್ತದೊತ್ತಡ, ಮಧುಮೇಹ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ ಎಂದರು .
ಅಕ್ಟೋಬರ್ 18ರಂದು ಹಣತೆ ಸಿಂಧೂರ ವಿಶೇಷ ಕಾರ್ಯಕ್ರಮ ನಡೆಯಲಿದ್ದು ಸಾಯಂಕಾಲ 6ಗಂಟೆಗೆ ಭಿನ್ನ ಸಾಮರ್ಥ್ಯದ ಮಕ್ಕಳೊಂದಿಗೆ ದೀಪಾವಳಿ ಆಚರಣೆ ನಡೆಯಲಿದೆ. ಭಿನ್ನ ಸಾಮರ್ಥ್ಯ ದ ಮಕ್ಕಳು ತಯಾರಿಸಿದ ಹಣತೆಯನ್ನು ಸ್ಟಾಲ್ ಗಳಲ್ಲಿ ಮಾರಾಟ ಮಾಡಿ ಮಕ್ಕಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಲತೀಶ್ , ಪ್ರತಿಷ್ಠಾನದ ಸದಸ್ಯರಾದ ನವೀನ್ ಕುಲಶೇಖರ , ಸುಧಾ ಪ್ರಹ್ಲಾದ್ ಉಪಸ್ಥಿತತರಿದ್ದರು .