ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಭೇಟಿಗೆ ಎಂಎಲ್ಸಿ ಕಿಶೋರ್ ಕುಮಾರ್ ಪತ್ನಿಗೆ ಅವಕಾಶ ನೀಡಿರುವುದನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸಮರ್ಥಿಸಿಕೊಂಡಿದ್ದಾರೆ. ಅವರೇನು ಕ್ರಿಮಿನಲ್ ಅಲ್ಲ ಅವರು ಬಿಜೆಪಿ ಪಕ್ಷದ ಸದಸ್ಯೆ ಎಂದು ಹೇಳಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಅವರು ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ನೀಡಬೇಕು ಅನ್ನೋ ವಿಚಾರದ ಪರವಾಗಿ ನಾನೂ ಇದ್ದೇನೆ. ಸಾಮಾನ್ಯ ಕಾರ್ಯಕರ್ತನಿಗೆ ಈ ಅವಕಾಶ ಕೊಡಬೇಕು ಅನ್ನುವವರ ವಾದ ಸರಿಯಿದೆ. ಆದರೆ ಕಿಶೋರ್ ಕುಮಾರ್ ಅವರ ಪತ್ನಿಯ ವಿಚಾರವಾಗಿ ನಡೆಯುತ್ತಿರುವ ವಿವಾದ ಅನಗತ್ಯ, ಅವರೂ ಕೂಡಾ ಭಾರತೀಯ ಮಹಿಳಾ ಮೋರ್ಚದಲ್ಲಿ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ. ಘಟನೆಯ ಬಳಿಕ ಅವರು ಮಹಿಳಾ ಮೋರ್ಚಾದ ಸಭೆಗೆ ಬಂದಿದ್ದರು. ನಾನೂ ಕೂಡಾ ಪಕ್ಷಕ್ಕಾಗಿ ದುಡಿದ್ದಿದ್ದೇನೆ ಎಂದಿದ್ದಾರೆ. ಪ್ರಧಾನಿ ಮೋದಿಯವರಿಗೆ ನಮಸ್ಕರಿಸಲು ಹೋದ ವಿಚಾರವನ್ನು ಇಷ್ಟೊಂದು ವಿವಾದ ಮಾಡುವ ಅಗತ್ಯವಿತ್ತೇ ಎಂದು ಅವರು ಬೇಸರ ಹೊರಹಾಕಿದ್ದಾರೆ. ಮಹಿಳೆಯಾಗಿ ನನ್ನ ಫೋಟೋವನ್ನ ಈ ರೀತಿಯಾಗಿ ವೈರಲ್ ಮಾಡಲಾಗುತ್ತಿದೆ, ಸಮಾಜದಲ್ಲಿ ನನ್ನ ವ್ಯಕ್ತಿತ್ವಕ್ಕೆ ಘಾಸಿ ಮಾಡುವ ಪ್ರಯತ್ನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದರು.
ಕಿಶೋರ್ ಕುಮಾರ್ ಎಂಎಲ್ಸಿ ಆಗಿರಬಹುದು, ಆದರೆ ಅವರ ಕುಟುಂಬವೇ ಪಕ್ಷದ ಜೊತೆಗೆ ಗುರುತಿಸಿಕೊಂಡಿದೆ. ಕಿಧೋರ್ ಪತ್ನಿಯನ್ನು ಕಳುಹಿಸಿದ್ದು ತಪ್ಪೇ ಎನ್ನುವವರಿಗೆ ಅವರೇನು ಕ್ರಿಮಿನಲ್ ಅಲ್ಲ, ದರೋಡೆ, ದೇಶವಿರೋಧಿ ಕೃತ್ಯದಲ್ಲಿ ಅವರು ಭಾಗವಹಿಸಿದವರಲ್ಲ. ಓರ್ವ ಸಾಮಾನ್ಯ ಮಹಿಳೆಯನ್ನು ಪ್ರಧಾನಿ ಬಳಿಗೆ ಕಳುಹಿಸಿದಕ್ಕೆ ವಿವಾದ ಮಾಡುವವರಿಗೆ ನಾವು ಏನೂ ಹೇಳೋಕಾಗಲ್ಲ ಎಂದರು.
ಇದನ್ನು ವಿವಾದ ಮಾಡುದಕ್ಕಿಂತ ಮುಂದೆ ಕಾರ್ಯಕರ್ತನಿಗೆ ಅವಕಾಶ ಕೊಡುವ ವಿಚಾರವನ್ನು ನಾನು ಸ್ವಾಗತ ಮಾಡುತ್ತೇನೆ, ಪ್ರಧಾನಿ ಮೋದಿ ಉಡುಪಿಗೆ ಬರುವ ಕಾರ್ಯಕ್ರಮವಾಗಿತ್ತು. ಆ ಕಾರಣಕ್ಕೆ ಬಹುತೇಕ ಲಿಸ್ಟ್ ಅನ್ನ ಉಡುಪಿ ಬಿಜೆಪಿಯೇ ನಿರ್ವಹಿಸಿತ್ತು. ದಕ್ಷಿಣಕನ್ನಡದಿಂದ ಕೆಲವರಿಗೆ ಅವಕಾಶ ಕೊಟ್ಟಿದೆ. ಸಾಮಾನ್ಯರಲ್ಲಿ ಸಾಮಾನ್ಯರಿಗೆ ಅವಕಾಶ ನೀಡಿದ್ದೇವೆ. ಕಿಶೋರ್‌ಕುಮಾರ್ ಪತ್ನಿಗೆ ಅವಕಾಶ ನೀಡಿರುವುದನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತೇನೆ. ನಾವೇನು ತಪ್ಪು ಮಾಡಿಲ್ಲ, ಅವರು ಕ್ರಿಮಿನಲ್ ಕೂಡಾ ಅಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.