“ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಶಕ್ತಿ ಹೆಚ್ಚಾಗುತ್ತದೆ ” -ಡಾ.ಎಂ.ಎನ್‌.ರಾಜೇಂದ್ರ ಕುಮಾರ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೌಕರರ ಒಕ್ಕೂಟ ಮಂಗಳೂರು ವತಿಯಿಂದ ಕ್ರೀಡಾಕೂಟವು ಇಂದು ಬೆಳಗ್ಗೆ, ಮಂಗಳಾ ಕ್ರೀಡಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, “ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಶಕ್ತಿ ಹೆಚ್ಚಾಗುತ್ತದೆ. ನೌಕರರಿಗಾಗಿ ಕ್ರೀಡಾಕೂಟ ಏರ್ಪಡಿಸಿ ಅವರಲ್ಲಿ ಹುಮ್ಮಸ್ಸು ತುಂಬುವ ಕಾರ್ಯಕ್ರಮ ಶ್ಲಾಘನೀಯವಾದುದು. ಸದಾಕಾಲ ಕೆಲಸದ ಒತ್ತಡದಲ್ಲಿ ಇರುವ ನೌಕರರು ತಮ್ಮ ಒತ್ತಡವನ್ನು ಮರೆತು ಸೌಹಾರ್ದಯುತವಾಗಿ ಇದರಲ್ಲಿ ಪಾಲ್ಗೊಳ್ಳಬೇಕು” ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹ ನಿರ್ದೇಶಕ ಪ್ರದೀಪ್ ಡಿಸೋಜ ಮಾತನಾಡಿ, “ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಸಹಕಾರಿ ಕ್ಷೇತ್ರದಷ್ಟೇ ಕ್ರೀಡಾ ಕ್ಷೇತ್ರಕ್ಕೂ ಮಹತ್ವದ ಕೊಡುಗೆ ನೀಡುತ್ತಾ ಬಂದವರು. ನೌಕರರು ಒಂದಾಗಿ ಒಂದೆಡೆ ಸೇರಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಖುಷಿಯ ವಿಚಾರ” ಎಂದರು.ಕಾರ್ಯಕ್ರಮದಲ್ಲಿ ಬ್ಯಾಂಕ್‌ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಕಾರ್ಯ ನಿರ್ವಹಣಾಧಿಕಾರಿ ಗೋಪಿನಾಥ್ ಭಟ್, ದೇವರಾಜ್ ರೈ, ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬೊಳ್ಕೊಟ್ಟು, ಒಕ್ಕೂಟದ ಉಪಾಧ್ಯಕ್ಷ ರಾಜಾರಾಮ್ ಶೆಟ್ಟಿ, ಜೋವಿನ್ ಪ್ರಕಾಶ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

ಒಕ್ಕೂಟದ ಅಧ್ಯಕ್ಷ ಕರುಣಾಕರ ಅವರು ಪ್ರಾಸ್ತಾವಿಕ ನುಡಿಯನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಬ್ಯಾಂಕ್ ಅಧ್ಯಕ್ಷರನ್ನು ನೌಕರರ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ವಿವಿಧ ಕ್ರೀಡೆಗಳಲ್ಲಿ ವಿಜೇತ ಒಕ್ಕೂಟದ ಸದಸ್ಯರ ತಂಡಗಳಿಗೆ ಇದೇ ಸಂದರ್ಭದ ಬಹುಮಾನ ವಿತರಣೆ ನಡೆಯಿತು .

SHARE
Loading spinner

Leave a Reply

Your email address will not be published. Required fields are marked *

error: Content is protected !!