ಮಂಜೇಶ್ವರ : ಮಂಜೇಶ್ವರ ಒಳ ಪೇಟೆಯ ರೈಲ್ವೇ ನಿಲ್ದಾಣಕ್ಕೆ ಸಾಗುವ ಹಾಗೂ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿರುವ ಶೆಡ್ ಪಕ್ಕದಲ್ಲೇ ವಾಣಿಜ್ಯ ವಸತಿ ಸಮುಚ್ಚಯಗಳಿಂದ ಹರಿದು ಬರುತ್ತಿರುವ ಶೌಚಾಲಯದ ಕೊಳಕು ನೀರು ಕಟ್ಟಿ ನಿಂತಿದ್ದು ಇದರ ದುರ್ಗಂಧದಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡು ನಡೆದಾಡ ಬೇಕಾದ ದುಸ್ಥಿತಿ ಎದುರಾಗಿರುವುದಾಗಿ ಸ್ಥಳೀಯರು ಆರೋಪಿಸುತಿದ್ದಾರೆ.
ಇಲ್ಲಿಗೆ ಸಮೀಪವೇ ಇರುವ ವಾಣಿಜ್ಯ ವಸತಿ ಸಮುಚ್ಚಯಗಳಲ್ಲಿ ಕೊಳಕು ನೀರು ಶೇಖರಣೆ ಮಾಡುವ ವ್ಯವಸ್ಥೆಯನ್ನು ಕಲ್ಪಿಸದೆ ಬೇಕಾಬಿಟ್ಟಿಯಾಗಿ ಈ ದುರ್ಗಂಧದ ನೀರನ್ನು ಸಾರ್ವಜನಿಕ ಸ್ಥಳಕ್ಕೆ ಹರಿದು ಬಿಡುತ್ತಿರುವವರ ವಿರುದ್ಧ ಕ್ರಮ ಜರಗಿಸಬೇಕಾದ ಆರೋಗ್ಯ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಹಲವು ಶಂಕೆಗಳಿಗೆ ಎಡೆ ಮಾಡಿ ಕೊಟ್ಟಿರುವುದಾಗಿ ಸ್ಥಳೀಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಸಾಂಕ್ರಾಮಿಕ ರೋಗ ಭೀತಿಗೆ ಕಾರಣವಾಗಿದ್ದು, ಪ್ರತಿದಿನವೂ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಸೇರಿದಂತೆ ನೂರಾರು ಮುಂದಿ ಈ ದಾರಿಯಿಂದ ಹೋಗಬೇಕಾಗಿದೆ. ಆದರೆ ಕೊಳಕು ನೀರಿನಿಂದ ಮಾರ್ಗ ತುಂಬಿ ಹೋಗಿದ್ದು, ಎಲ್ಲರೂ ಮುಗು ಮುಚ್ಚಿಕೊಂಡು ಸಾಗುತ್ತಿದ್ದಾರೆಂದು ಸ್ಥಳೀಯರೊಬ್ಬರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸಂಬಂಧ ಪಟ್ಟವರು ಕೂಡಲೇ ಇತ್ತ ಕಡೆ ಗಮನ ಹರಿಸಿ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.