ಕಾಸರಗೋಡು: ಜಿಲ್ಲೆಯಲ್ಲಿ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಕೇರಳ ವಿಧಾನಸಭೆ ಇತ್ತೀಚೆಗೆ ಅಂಗೀಕರಿಸಿದ ಮಲೆಯಾಳ ಭಾಷಾ ಕಲಿಕೆ ಕಡ್ಡಾಯ ಮಸೂದೆ, ಕಾಸರಗೋಡಿನ ಕನ್ನಡಿಗರಲ್ಲಿ ಆತಂಕ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಭಾಷಿಕರನ್ನು ಮಸೂದೆಯ ವ್ಯಾಪ್ತಿಯಿಂದ ಹೊರತಾಗಿಸಬೇಕು ಎಂದು ಬಿಜೆಪಿ ಕಲ್ಲಿಕೋಟೆ ವಲಯ ಅಧ್ಯಕ್ಷ ಹಾಗೂ ನ್ಯಾಯವಾದಿ ಕೆ. ಶ್ರೀಕಾಂತ್ ಆಗ್ರಹಿಸಿದ್ದಾರೆ.
ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಜಿಲ್ಲೆಯ ಕನ್ನಡಿಗರಿಗೆ ತಮ್ಮ ತಾಯ್ನುಡಿಯಲ್ಲೇ ಶಿಕ್ಷಣ ಪಡೆಯುವ ಹಕ್ಕು ಸಿಗಬೇಕು. ಕನ್ನಡ ಕಲಿಕೆಯ ಅವಕಾಶವನ್ನು ಕಸಿದುಕೊಳ್ಳುವ ಯಾವುದೇ ನೀತಿ ಅಂಗೀಕಾರಾರ್ಹವಲ್ಲ” ಎಂದು ಹೇಳಿದರು.
ಭಾಷಾ ಸಮಸ್ಯೆ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದರು. ಚುನಾವಣಾ ಆಯೋಗದ ಎಸ್‌ಐಆರ್ ಸೇರಿದಂತೆ ಸರ್ಕಾರಿ ದಾಖಲೆಗಳು ಮಲೆಯಾಳ ಭಾಷೆಯಲ್ಲಿ ಮಾತ್ರ ಲಭ್ಯವಿರುವುದರಿಂದ ಅನೇಕ ಕನ್ನಡಿಗರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ದೂರಿದರು. ಮತದಾರರ ಪಟ್ಟಿ ಕನ್ನಡದಲ್ಲಿ ಲಭ್ಯವಿಲ್ಲದ ಕಾರಣ ಹಲವರು ತಮ್ಮ ಮತಹಕ್ಕಿನಿಂದಲೇ ವಂಚಿತರಾಗಿರುವುದು ಗಂಭೀರ ವಿಚಾರ ಎಂದು ಅವರು ಹೇಳಿದರು.
ವಿಶೇಷವಾಗಿ ಎಸ್‌ಐಆರ್ ಫಾರ್ಮ್ ಮಲೆಯಾಳದಲ್ಲಿ ಮಾತ್ರ ಇರುವುದರಿಂದ ಅದನ್ನು ಭರ್ತಿಗೊಳಿಸಲು ಕನ್ನಡಿಗರಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಚುನಾವಣಾ ಆಯೋಗದೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಇದೇ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಳವಡಿಸುವ ಎಲ್ಲಾ ಸ್ಥಳ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಸೇರಿಸಬೇಕು ಎಂಬ ಬೇಡಿಕೆಯನ್ನು ಸಹ ಅವರು ಮುಂದಿಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಸುನಿಲ್ ಪಿ.ಆರ್., ಬಾಬುರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ಕನ್ನಡಿಗರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಯಲಿದೆ ಎಂಬ ಸಂದೇಶ ನೀಡಿದರು.