ಮಂಜೇಶ್ವರ : ರಾ. ಹೆದ್ದಾರಿಯ ಟೋಲ್ ಶುಲ್ಕ ಸಂಗ್ರಹಕ್ಕೆ ಟೋಲ್ ವಿರೋಧಿ ಕ್ರಿಯಾ ಸಮಿತಿ ನೇತೃತ್ವದಲ್ಲಿ, ಶಾಸಕ ಎಕೆಎಂ ಅಶ್ರಫ್ ನೇತೃತ್ವದಲ್ಲಿ ತಡೆಯೊಡ್ಡಲಾಯಿತು.ಸೋಮವಾರ ಬೆಳಿಗ್ಗೆ ಟೋಲ್ ಶುಲ್ಕ ವಸೂಲಾತಿ ಆರಂಭಗೊಂಡ ಬೆನ್ನಲ್ಲೇ ಪ್ರತಿಭಟನಾಕಾರರು ಆಗಮಿಸಿ ತಡೆಯೊಡ್ಡುವ ದೃಶ್ಯ ಕಂಡು ಬಂತು. ಕೂಡಲೇ ಆಗಮಿಸಿದ ಪೊಲೀಸರು ಶಾಸಕರ ಸಹಿತ ಪ್ರತಿಭಟನಾ ಕಾರರನ್ನು ಬಂಧಿಸಿ ಕೊಂಡೊಯ್ಯಲು ಯತ್ನಿಸಿದರು. ಇದು ಸ್ಥಳದಲ್ಲಿ ಸಂಘರ್ಷಾವಸ್ಥೆಗೆ ಕಾರಣವಾಯಿತು.
ಟೋಲ್ ವಿರುದ್ಧ ನಡೆದ ಪ್ರತಿಭಟನೆಯಿಂದಾಗಿ ಕಾಸರಗೋಡು ಮಂಗಳೂರು ಮಧ್ಯೆ ಕು0ಬಳೆಯಲ್ಲಿ ಹೆದ್ದಾರಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ವಾಹನಗಳು ದಾರಿ ಬದಲಿಸಿಕೊಂಡು ಸಾಗಲು ಹೆಣಗಾಡುತ್ತಿರುವ ದೃಶ್ಯ ಕಂಡು ಬಂತು.
ಟೋಲ್ ಪ್ರತಿಭಟನೆಗೆ ನೇತೃತ್ವ ನೀಡಿದ ಶಾಸಕ ಎಕೆಎಂ ಅಶ್ರಫ್ ತಾಸುಗಳ ಕಾಲ ಹೆದ್ದಾರಿಯಲ್ಲಿ ಮಲಗಿ ಪ್ರತಿಭಟಿಸಿದರು. ತಲಪಾಡಿಯಿಂದ ಕೇವಲ 23ಕಿ. ಮೀ ದೂರದಲ್ಲಿದು ಕಾನೂನು ವಿರುದ್ಧವಾದ ಟೋಲ್ ಗೇಟ್ ಅನಧಿಕೃತ ಎಂದು ಹೇಳಿ ಪ್ರತಿಭಟಿಸಿದರು. ಪೋಲೀಸರು ಬಲವಂತದಿಂದ ಶಾಸಕರನ್ನು ಮತ್ತು ಕ್ರಿಯಾ ಸಮಿತಿ ಕಾರ್ಯಕರ್ತರನ್ನು ಬಂಧಿಸಿಕೊಂಡೊಯ್ದರು.
ಆದರೆ ಪ್ರತಿಭಟನೆ ತಾತ್ಕಾಲಿಕವಾಗಿಯಷ್ಟೇ ಇಂದಿಗೆ ಕೊನೆಗೊಂಡಿದೆ. ಇಡೀ ಮಂಜೇಶ್ವರ ಕಾಸರಗೋಡು ವಿಧಾನಸಭಾ ಕ್ಷೇತ್ರದ ಜನರನ್ನು ಒಗ್ಗೂಡಿಸಿ ಶೀಘ್ರದಲ್ಲೇ ಜನಾಂದೋಲನ ನಡೆಯಲಿದೆ ಎಂದು ಶಾಸಕ ಎಕೆಎಂ ಅಶ್ರಫ್ ತಿಳಿಸಿದರು