ಕೇರಳ ವಿರುದ್ದ ಕರ್ನಾಟಕ ಸಿಎಂ ಹೇಳಿಕೆ ವಾಸ್ತವಕ್ಕೆ ವಿರುದ್ಧ: ಕೆ. ಆರ್. ಜಯಾನಂದ

ಮಂಜೇಶ್ವರ : ಮಲಯಾಳಂ ಭಾಷಾ ಮಸೂದೆ ಹೆಸರಲ್ಲಿ ಕರ್ನಾಟಕ ಮುಖ್ಯಮಂತ್ರಿ ಹಾಗೂ ಕರ್ನಾಟಕದ ಸಚಿವರು ಮಸೂದೆ ಯಲ್ಲೇನಿದೆ ಎಂಬುದರಿಯದೇ ಕೇರಳ ಮತ್ತು ಮಲಯಾಳಂ ಬಗ್ಗೆ ವಾಸ್ತವ ವಿರುದ್ಧ ಹೇಳಿಕೆ ನೀಡಿದ್ದು ಸರಿಯಲ್ಲ.ಇದು ಕೇರಳ ವಿರೋಧಿ ಧೋರಣೆ ತಳೆಯುತ್ತಿದ್ದಾರೆ ಎಂಬುವುದಕ್ಕೆ ಉತ್ತಮ ಉದಾಹರಣೆ ಯಾಗಿದೆ. ಈ ಹೇಳಿಕೆ ಎಂದು ಸಿಪಿಐ ಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕೆ ಆರ್ ಜಯಾನಂದ ಆರೋಪಿಸಿದ್ದಾರೆ.

ಮಲಯಾಳಂ ಭಾಷಾ ಮಸೂದೆಯನ್ನು ಕೇರಳ ಸರಕಾರ ವರ್ಷದ ಹಿಂದೆಯೇ ಮಂಡಿಸಿ ಅಂಗೀಕರಿಸಿತ್ತು.ಆದರೆ ಅಂದು ಇದಕ್ಕೆ ರಾಷ್ಟ್ರಪತಿ ಅಂಕಿತ ಹಾಕದೇ ಮರಳಿಸಿದ್ದರು.ಪರಿಷ್ಕೃತ ಮಸೂದೆಯಲ್ಲಿ ಕೇರಳದ ಮತ್ತು ತಮಿಳು ಭಾಷಾ ಅಲ್ಪಸಂಖ್ಯಾತರಿಗೆ ಅವರವರ ಮಾತೃಭಾಷೆ ಯಲ್ಲಿ ಕಲಿಯುವ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಅವರು ಬಯಸಿದಲ್ಲಿ ಮಲಯಾಳಂ ಕಲಿಕೆಗೂ ಅವಕಾಶವಿದೆ ಎಂದಿದೆ. ಕೇರಳ ಸರಕಾರ ಮಸೂದೆಯ ಮರೆಯಲ್ಲಿ ಯಾವ ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ಕಸಿಯುತ್ತಿಲ್ಲ ಬದಲು ಸಂರಕ್ಷಿಸುತ್ತಿದೆ. ಈ ವಾಸ್ತವಗಳನ್ನ ಅರಿಯದೇ ಮಸೂದೆಯನ್ನೇ ಓದದೆ ಕರ್ನಾಟಕ ಮುಖ್ಯಮಂತ್ರಿ ಹಾಗೂ ಸಚಿವರು ಬಹಿರಂಗ ಹೇಳಿಕೆ ಇತ್ತಿರುವುದು ಅಸಮಂಜಸವಾಗಿದೆ.

ಭಾಷಾ ಮಸೂದೆಯ ಕುರಿತು ಕನ್ನಡದ ಕಾಳಜಿಯಿಂದ ಕರ್ನಾಟಕ ಮುಖ್ಯಮಂತ್ರಿ ಗೆ ಕೇರಳದ ಜೊತೆ ಸಂಪರ್ಕ ಹೊಂದಿ ವಿಷಯವೇನೆಂದು ತಿಳಿಯಬಹುದಿತ್ತು. ಆದರೆ ಹಾಗೆ ಮಾಡದೆ ಬಹಿರಂಗವಾಗಿ ಹೇಳಿಕೆ ನೀಡುವುದು ಉಭಯ ರಾಜ್ಯಗಳ ಸಹೋದಾರ್ಯ ಸಂಬಂಧಕ್ಕೆ ಹಾನಿ ಉಂಟುಮಾಡುವಂತಿದೇ. ಕೇರಳ ಕರ್ನಾಟಕದ ಜೊತೆ ಭಾಷಾ ಸಂಘರ್ಷದ ಸಮರ ಬಯಸುತ್ತಿಲ್ಲ ಮತ್ತು ಸೌಹಾರ್ದ ಸಂಬಂಧವನ್ನೇ ಬಯಸುತ್ತಿದೆ. ವಾಸ್ತವರಿಯದೆ ಕರ್ನಾಟಕ ಕೇರಳವನ್ನು ಟೀಕಿಸುವಾಗ ಕೇರಳದ ಕಾಂಗ್ರೆಸ್ಸಿಗರು ಸುಮ್ಮನಿರುವುದು ಸಂಶಯಾಸ್ಪಪದವಾಗಿದೆ.

ಮಲಯಾಳಂ ಭಾಷಾ ಮಸೂದೆ 2025 ಸೆಕ್ಷನ್ 6/1 ರಲ್ಲಿ ಹೇಳುವುದು ಹೀಗೆ ಕೇರಳದಲ್ಲಿನ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 10ನೇ ತರಗತಿಯವರೆಗೆ ಮಲಯಾಳಂ ಕಡ್ಡಾಯ ಮೊದಲ ಭಾಷೆಯಾಗಿದೆ. ಸೆಕ್ಷನ್ 6/3 ರಲ್ಲಿ ಮಾತೃಭಾಷೆ ಮಲಯಾಳಂ ಹೊರತಾದ ಯಾವುದೇ ಭಾಷೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಭಾಷೆಯ ಜೊತೆಗೆ ಮಲಯಾಳಂ ಎರಡನೇ ಪಠ್ಯವಾಗಿ ಅಧ್ಯಯನ ಮಾಡುವ ಅವಕಾಶ ನೀಡಲಾಗಿದೆ. ಕೇರಳದಲ್ಲಿ ತಮಿಳು ಮತ್ತು ಕನ್ನಡ ಭಾಷೆ ಅಲ್ಪಸಂಖ್ಯಾತರು ಎಂಬ ಘೋಷಣೆ ಮಾಡಲಾದ ಪ್ರದೇಶದಲ್ಲಿರುವ ರಾಜ್ಯ ಸರಕಾರದ ಕಾರ್ಯಾಲಯ ಇಲಾಖೆಯ ಮುಖ್ಯಸ್ಥರು ರಾಜ್ಯ ಸರ್ಕಾರದ ಎಲ್ಲಾ ಸ್ಥಳೀಯ ಕಚೇರಿಗಳೊಂದಿಗೆ ತಮ್ಮ ಪತ್ರ ವ್ಯವಹಾರವನ್ನು ತಮ್ಮ ತಮ್ಮ ಮಾತೃಭಾಷೆಯಲ್ಲಿ (ಕನ್ನಡ, ತಮಿಳು) ನಡೆಸಬಹುದು ಉತ್ತರ ಸಹ ಅವರವರ ಭಾಷೆಯಲ್ಲಿ ನೀಡಬೇಕು.


ಕೇರಳದ ಮಾತೃಭಾಷೆ ಯಾಗಿರುವ ಮಲಯಾಳಂ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮದ ಅನುಸಾರವಾಗಿ ರಾಜ್ಯದ ಶಾಲೆಗಳಲ್ಲಿ ಲಭ್ಯವಿರುವ ತಮ್ಮ ಭಾಷೆಗಳಲ್ಲಿ ಅಧ್ಯಯನ ಮುಂದುವರಿಸಲು ಅವಸರವಿದೆ. ಕೇರಳದಲ್ಲಿ ಅಧ್ಯಯನ ಮಾಡುವ ಮಾತೃಭಾಷೆ ಮಲಯಾಳಂ ಅಲ್ಲದವರಿಗೆ 9ನೇ ಹತ್ತನೇ ತರಗತಿ ಹಾಗೂ ಹಿರಿಯ ಪ್ರಾಥಮಿಕ ಮಟ್ಟದ ಪರೀಕ್ಷೆಗಳಲ್ಲಿ ಮಲಯಾಳಂ ಪರೀಕ್ಷೆ ಬರೆಯುವ ಕಡ್ಡಾಯದಿಂದ ವಿನಾಯಿತಿ ಇದೆ. ಸೆಕ್ಷನ್ 9 ರ ಪ್ರಕಾರ ಜಿಲ್ಲಾ ನ್ಯಾಯಾಲಯದ ಆದೇಶಗಳು ಮತ್ತು ತೀರ್ಪುಗಳು ಮಲಯಾಳಂ ನಲ್ಲಿ ಪ್ರಕಟಿಸಬೇಕು. ಆದರೆ ಭಾಷಾ ಅಲ್ಪಸಂಖ್ಯಾತರ ಪ್ರದೇಶದ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ಅಥವಾ ಇಂಗ್ಲಿಷ್ ನಲ್ಲಿ ತೀರ್ಪು ಪ್ರಕಟಿಸಬೇಕು.

ಕನ್ನಡಿಗರು ಇರುವ ಪ್ರದೇಶದಲ್ಲಿ ಜಾಹೀರಾತು ಬೋರ್ಡು ಗಳನ್ನು ಕನ್ನಡ /ಮಲಯಾಳಂ ನಲ್ಲಿ ಪ್ರದರ್ಶಿಸಬಹುದು.ಇದೆಲ್ಲವೂ ಕಾಸರಗೋಡಿನ ಕನ್ನಡಿಗರಿಗೆ ನೀಡುವಾಗ ಕರ್ನಾಟಕದ ಮುಖ್ಯ ಮಂತ್ರಿ ಹಾಗೂ ಕಾಂಗ್ರೆಸ್ ನೇತಾರರು ಕಾಸರಗೋಡಿನ ಕನ್ನಡಿಗರನ್ನು ವಂಚಿಸುವುದು ಸರಿಯಲ್ಲ .ಭಾರತದ ಸಂವಿಧಾನದ ಅಡಿಯಲ್ಲಿ ಸತ್ಯ ಪ್ರತಿಜ್ಞೆ ಮಾಡಿ ಅಧಿಕಾರಕ್ಕೆ ಏರಿದ ಹಿರಿಯ ರಾಜಕೀಯ ಮುಖಂಡರಾದ ಶ್ರೀ ಸಿದ್ದರಾಮಯ್ಯ ಮತ್ತು ರಾಜಕೀಯ ಬುದ್ಧಿವಂತರಾದ ಡಿ ಕೆ ಶಿವಕುಮಾರ್ ನೀಡುವ ಹೇಳಿಕೆಗಳು ಭಾಷೆಯ ಹೆಸರಲ್ಲಿ ಕೇರಳದಲ್ಲಿ ಗಲಭೆ ಎಬ್ಬಿಸುವ ಹುನ್ನಾರವಾಗಿದೆ.ಹಾಗಾದರೆ ಕರ್ನಾಟಕದ ಗಡಿ ಪ್ರದೇಶವಾದ ದಕ್ಷಿಣ ಕನ್ನಡ ದಲ್ಲಿರುವ ಮಲೆಯಾಳಂ ಮಾತೃ ಭಾಷೆ ಯವರಿಗೆ ಅಲ್ಲಿ ಮಲೆಯಾಳಂ ನಲ್ಲಿ ಕಲಿಯುವ ಅವಕಾಶ ನೀಡಲು ಇವರು ತಯಾರಿದ್ದಾರ ಎಂದು ಸ್ಪಷ್ಟ ಪಡಿಸಬೇಕಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!