ಸದ್ಬಳಕೆ ಆಗದ 1 ಕೋಟಿ 30 ಲಕ್ಷ ರೂಪಾಯಿ ಅನುದಾನ ನೆನೆಗುದಿಗೆ ಬಿದ್ದ ಸುರುಮಾ ತೋಡು ಶುದ್ದೀಕರಣ

ಮಂಜೇಶ್ವರ, ಮೇ 23: ಮಂಜೇಶ್ವರ ಗ್ರಾಮ ಪಂಚಾಯತಿಯ 3ನೇ ವಾರ್ಡಿನ ವ್ಯಾಪ್ತಿಯಲ್ಲಿ ಮಳೆಗಾಲ ಆರಂಭವಾಗುವ ಮುನ್ನ ಸುರುಮ ತೋಡನ್ನು ಶುದ್ಧೀಕರಣ ಮಾಡುವ ಕೆಲಸಕ್ಕೆ ಸಂಬಂಧಪಟ್ಟ ಉದ್ದೇಶಿತ ಕಾರ್ಯಗಳು ಇಲ್ಲಿಯವರೆಗೆ ಆರಂಭವಾಗಿಲ್ಲ ಎಂಬ ಆಕ್ರೋಶ ಸ್ಥಳೀಯರಿಂದ ವ್ಯಕ್ತವಾಗುತ್ತಿದೆ. ಈ ನಿರ್ಲಕ್ಷ್ಯದ ಪರಿಣಾಮವಾಗಿ, ತೋಡಿನಲ್ಲಿ ತುಂಬಿ ಕೊಂಡಿರುವ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯ ವಸ್ತುಗಳು ಕೃಷಿಕರ ಹೊಲಗಳಿಗೆ ನುಗ್ಗಿ ಬೆಳೆ ಹಾನಿಗೆ ಕಾರಣವಾಗುತ್ತಿದೆ.

ಸ್ಥಳೀಯ ರೈತರು ಹಾಗೂ ಪರಿಸರವಾಸಿಗಳು ನೀಡಿರುವ ಮಾಹಿತಿಯಂತೆ, ತೋಡಿನ ನವೀಕರಣಕ್ಕಾಗಿ ಸರಕಾರದಿಂದ ಸುಮಾರು ಒಂದು ಕೋಟಿ 30 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದೆ. ಆದರೆ ಈ ಮೊತ್ತವನ್ನು ಉಪಯೋಗಿಸಿ ಯಾವುದೇ ಶುದ್ಧೀಕರಣ ಅಥವಾ ಅಭಿವೃದ್ಧಿ ಕೆಲಸಗಳು ಆರಂಭವಾಗದಿರುವುದರಿಂದ ಜನರಲ್ಲಿ ಅಸಮಾಧಾನ ಮೂಡಿದೆ.

ಪ್ರತಿ ಮಳೆಯಲ್ಲೂ ತೋಡಿನ ನೀರು ಹೊಲಗಳತ್ತ ಹರಿದು ಬೆಳೆ ಹಾಳುಮಾಡುತ್ತಿದೆ. ಈ ಬಾರಿ ಪ್ಲಾಸ್ಟಿಕ್ ತ್ಯಾಜ್ಯಗಳು ಕೂಡ ಸೇರಿ ಪರಿಸ್ಥಿತಿ ಇನ್ನಷ್ಟು ಕಠಿಣವಾಗಿದೆ. ಅಧಿಕಾರಿಗಳಾಗಲೀ ಜನಪ್ರತಿನಿಧಿಗಳಾಗಲೀ ಇತ್ತ ತಿರುಗಿಯೂ ನೋಡಿಲ್ಲ ಎಂಬುದಾಗಿ ಸ್ಥಳೀಯ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಗ್ರಾಮ ಪಂಚಾಯತಿ ಅಧಿಕಾರಿಗಳ ಸ್ಪಂದನೆಯಿಲ್ಲದ ಬಗ್ಗೆ ಸ್ಥಳೀಯರು ದೂರಿರುವಂತಾಗಿದ್ದು, ಪರಿಸ್ಥಿತಿಯನ್ನು ತುರ್ತು ಆಧಾರದ ಮೇಲೆ ಸರಿ ಮಾಡಬೇಕೆಂಬ ಬೇಡಿಕೆಯು ಹೆಚ್ಚುತ್ತಿದೆ. ಪರಿಸರದ ಹಿತದೃಷ್ಟಿಯಿಂದ ಹಾಗೂ ಕೃಷಿಕರ ಜೀವನೋಪಾಯದ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!