ಮನೆ ಬೀಗ ಒಡೆದು ನುಗ್ಗಿದ ಕಳ್ಳರು: ಕಾಸರಗೋಡಿನಲ್ಲಿ ವಕೀಲೆಯ ಮನೆಯಲ್ಲಿ ಲಕ್ಷಾಂತರ ನಷ್ಟ

ಕಾಸರಗೋಡು: ಕುಂಬಳ ನೈಕಾಪ್ಪಿ ನಲ್ಲಿ ಪ್ರದೇಶದಲ್ಲಿ ವಕೀಲೆಯೊಬ್ಬರ ಮನೆಗೆ ಕಳ್ಳರು ನುಗ್ಗಿ ಭಾರೀ ದೋಚಾಟ ನಡೆಸಿದ್ದಾರೆ. ಮನೆಯ ಹಿಂಭಾಗದ ಬಾಗಿಲನ್ನು ಒಡೆದು ಒಳನುಗ್ಗಿದ ಕಳ್ಳರು, ಕಪಾಟಿನಲ್ಲಿ ಇಡಲಾಗಿದ್ದ 29 ಪವನ್ ಚಿನ್ನಾಭರಣಗಳು, ಸುಮಾರು ₹2.5 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳು ಹಾಗೂ ₹5,000 ನಗದು ದೋಚಿ ಪರಾರಿಯಾಗಿದ್ದಾರೆ.

ನೆಕ್ಲೆಸ್, ಬಳೆಗಳು, ಉಂಗುರಗಳು, ಬ್ರೇಸ್ಲೆಟ್, ದೊಡ್ಡ ಹಾರ, ಕಿವಿಯೋಲೆಗಳು, ಮಕ್ಕಳ ಹಾರ, ಮಕ್ಕಳ ಚಿನ್ನದ ಬಳೆ, ಕಲ್ಲು ಅಳವಡಿಸಿದ ಹಾರ ಸೇರಿದಂತೆ ವಿವಿಧ ಚಿನ್ನಾಭರಣಗಳು ಕಳವಾಗಿವೆ. ಒಟ್ಟು ಸುಮಾರು ₹31,67,000 ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಭಾನುವಾರ ಸಂಜೆ 6.30ರಿಂದ ರಾತ್ರಿ 8 ಗಂಟೆಯೊಳಗೆ ಈ ಘಟನೆ ನಡೆದಿದೆ. ಕಾಸರಗೋಡು ಬಾರ್‌ನ ವಕೀಲೆಯಾದ ಚೈತ್ರಾ ಮತ್ತು ಅವರ ಕುಟುಂಬ ಮನೆಗೆ ಬೀಗ ಹಾಕಿ ಕಣಿಪುರ ಗೋಪಾಲಕೃಷ್ಣ ದೇವಸ್ಥಾನದ ಉತ್ಸವಕ್ಕೆ ತೆರಳಿದ್ದರು. ರಾತ್ರಿ 8 ಗಂಟೆಗೆ ಮನೆಗೆ ಮರಳಿದಾಗ ಒಳಗಡೆ ದೀಪಗಳು ಬೆಳಗುತ್ತಿದ್ದವು. ಒಳಗೆ ಪ್ರವೇಶಿಸಿ ಪರಿಶೀಲಿಸಿದಾಗ ಅಲಮಾರೆಯನ್ನು ಬಲವಂತವಾಗಿ ತೆರೆದು ಬಟ್ಟೆಗಳನ್ನು ಚದುರಿಸಿರುವುದು ಕಂಡುಬಂದಿತು.

ಮಾಹಿತಿ ಪಡೆದ ಕುಂಬಳೆ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಸೋಮವಾರ ಡಾಗ್ ಸ್ಕ್ವಾಡ್ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಚೈತ್ರಾ ನೀಡಿದ ದೂರಿನ ಆಧಾರದಲ್ಲಿ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .

SHARE
Loading spinner

Leave a Reply

Your email address will not be published. Required fields are marked *

error: Content is protected !!