ಕಾಸರಗೋಡು: ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಸಂಜೆ ಬಂದ ಬಾಂಬ್ ಬೆದರಿಕೆ ಇ-ಮೇಲ್ ಹಿನ್ನೆಲೆಯಲ್ಲಿ ಪೊಲೀಸ್, ಡಾಗ್ ಸ್ಕ್ವಾಡ್ ಹಾಗೂ ಬಾಂಬ್ ಸ್ಕ್ವಾಡ್ ತಂಡಗಳು ಸಿವಿಲ್ ಸ್ಟೇಷನ್‌ನಲ್ಲಿ ವ್ಯಾಪಕ ತಪಾಸಣೆ ನಡೆಸಿದವು.
ಪರಿಶೀಲನೆಯಲ್ಲಿ ಬಾಂಬ್‌ಗೆ ಸಂಬಂಧಿಸಿದ ಯಾವುದೇ ಸುಳಿವುಗಳು ಪತ್ತೆಯಾಗದಿದ್ದರೂ, ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಎಚ್ಚರಿಕೆಯಿಂದ ಮುಂದುವರಿದಿದ್ದಾರೆ.
ಉಕ್ರೇನ್‌ನಿಂದ ಬಾಂಬ್ ಬೆದರಿಕೆ ಇ-ಮೇಲ್ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಸಂದೇಶದ ಮೂಲವನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಇತ್ತೀಚೆಗೆ ಕಾಸರಗೋಡು ನ್ಯಾಯಾಲಯ ಸಂಕೀರ್ಣಕ್ಕೂ ಇದೇ ರೀತಿಯ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು.
ಜಿಲ್ಲೆಯ ಪ್ರಮುಖ ಆಡಳಿತ ಕೇಂದ್ರಗಳಿಗೆ ಆಗಾಗ ಮರುಕಳಿಸುತ್ತಿರುವ ಬಾಂಬ್ ಬೆದರಿಕೆಗಳ ಹಿಂದೆ ಯಾರು ಇದ್ದಾರೆ, ಇದರ ಉದ್ದೇಶವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಅಧಿಕಾರಿಗಳ ಗಮನ ಬೇರೆಡೆ ಸೆಳೆಯಲು ಅಂಡರ್ ವರ್ಲ್ಡ್ ಸಂಘಟನೆಗಳು ಈ ರೀತಿಯ ಬೆದರಿಕೆ ನೀಡುತ್ತವೆಯೇ ಎಂಬ ಸಂಶಯವೂ ತನಿಖೆಯ ವ್ಯಾಪ್ತಿಯಲ್ಲಿದೆ.