ಮಂಜೇಶ್ವರ: ಮಂಜೇಶ್ವರದ ತೂಮಿನಾಡು ಹಿಲ್‌ಟಾಪ್‌ನಲ್ಲಿ ನಡೆದ ದಾರುಣ ಕುಟುಂಬ ಕಲಹದಲ್ಲಿ ಜೀವ ಕಳೆದುಕೊಂಡ ಜುಮೈಲ ಹಾಗೂ ಆಕೆಯ ಚಿಕ್ಕಪ್ಪ ಶೇಕುಂಞ ಅವರಿಗೆ ಕಣ್ಣೀರಿನೊಂದಿಗೆ ಅಂತಿಮ ವಿದಾಯ ದೊರೆಯಿತು. ನೋವು ಮತ್ತು ದುಃಖದಿಂದ ತುಂಬಿದ ವಾತಾವರಣದಲ್ಲಿ ಇಬ್ಬರನ್ನೂ ಬಂಗ್ರ ಮಂಜೇಶ್ವರ ಮುಯ್ಯುದ್ದೀನ್ ಜುಮಾ ಮಸೀದಿ ಖಬರ್‌ಸ್ಥಾನದಲ್ಲಿ ಅಂತಿಮ ವಿಶ್ರಾಂತಿಗೆ ಒಪ್ಪಿಸಲಾಯಿತು.
ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಪೋಸ್ಟ್‌ಮಾರ್ಟಂ ಪ್ರಕ್ರಿಯೆ ಪೂರ್ಣಗೊಂಡ ನಂತರ ಮಂಗಳವಾರ ಸಂಜೆ ಮೃತದೇಹಗಳನ್ನು ತೊಮಿನಾಡಿನಲ್ಲಿರುವ ಮನೆಗೆ ತರಲಾಯಿತು. ಅಂತಿಮ ದರ್ಶನಕ್ಕಾಗಿ ಬಂಧುಗಳು, ಸ್ನೇಹಿತರು ಹಾಗೂ ಸ್ಥಳೀಯರು ಸೇರಿದಂತೆ ಭಾರೀ ಜನಸ್ತೋಮ ಸೇರಿದ್ದು, ಕುಟುಂಬ ಸದಸ್ಯರ ಅಳಲು–ನಿಟ್ಟುಸಿರು ಪ್ರದೇಶವನ್ನೇ ದುಃಖದಲ್ಲಿ ಮುಳುಗಿಸಿತು.
ಮಯ್ಯತ್ ನಮಾಜಿನ ಬಳಿಕ ನೂರಾರು ಜನರ ಸಮ್ಮುಖದಲ್ಲಿ ದಫನ ಕಾರ್ಯ ನೆರವೇರಿಸಲಾಯಿತು. ದಾಂಪತ್ಯ ವೈಮನಸ್ಸು ಮತ್ತು ಸೊತ್ತು ವಿಚಾರದ ಜಗಳವೇ ಈ ದುರ್ಘಟನೆಯ ಹಿನ್ನೆಲೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ನಾಡನ್ನೇ ಬೆಚ್ಚಿಬೀಳಿಸಿದ ಈ ಘಟನೆಯ ಎಲ್ಲ ಆಯಾಮಗಳನ್ನು ಪರಿಶೀಲಿಸಿ ತನಿಖೆ ಮುಂದುವರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.