ಕಾಸರಗೋಡು: ಉಪ್ಪಳ ಮಣ್ಣಂಗುಳಿ ಅಂಗನವಾಡಿಯಲ್ಲಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಅಂಗನವಾಡಿಯ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಮಿಕ್ಸಿ ಹಾಗೂ ವಿವಿಧ ಪಾತ್ರೆಗಳನ್ನು ಕಳವು ಮಾಡಿದ್ದಾರೆ.
ಮಂಗಳವಾರ ಸಂಜೆ 3.30ರ ವೇಳೆಗೆ ಅಂಗನವಾಡಿಯನ್ನು ಮುಚ್ಚಿ ಹೋಗಲಾಗಿತ್ತು. ಬುಧವಾರ ಬೆಳಿಗ್ಗೆ 9.30ಕ್ಕೆ ಅಂಗನವಾಡಿ ತೆರೆಯಲು ಬಂದಾಗ ಬೀಗ ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ ಎಂದು ಶಿಕ್ಷಕಿ ಭಾಗೀರಥಿ ಅವರು ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ಪ್ರಕಾರ, ಒಂದು ಮಿಕ್ಸಿ, ಮೂರು ಜಾರ್‌ಗಳು, ಎರಡು ಕುಕ್ಕರ್‌ಗಳು, ತಟ್ಟೆಗಳು ಹಾಗೂ ಸೌಂಡ್ ಬಾಕ್ಸ್ ಕಳುವಾಗಿದೆ. ಮಾಹಿತಿ ಪಡೆದ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ತನಿಖೆಯ ಭಾಗವಾಗಿ ಡಾಗ್ ಸ್ಕ್ವಾಡ್ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.