ಮಂಜೇಶ್ವರ: ಕುಂಬಳೆ ಸಮೀಪದ ಭಾಸ್ಕರನಗರ ಕೆಎಸ್‌ಟಿಪಿ ರಸ್ತೆಯಲ್ಲಿ ಗಂಟೆಗಳ ವ್ಯತ್ಯಾಸದಲ್ಲಿ ಎರಡು ಕಾರುಗಳು ಅಪಘಾತಕ್ಕೀಡಾ ಗಿವೆ. ಈ ಪೈಕಿ ಒಂದು ಕಾರಿನಲ್ಲಿದ್ದ ಏಳು ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮತ್ತೊಂದು ಕಾರಿನಲ್ಲಿದ್ದ ನಾಲ್ಕು ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಿಂದ ಮರಳಿ ಬರುತ್ತಿದ್ದ ಕಳತ್ತೂರು ನಿವಾಸಿಗಳು ಸಂಚರಿಸಿದ ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿಚರಂಡಿಗೆ ಮಗುಚಿ ಬಿದ್ದಿದೆ. ಅದರಲ್ಲಿದ್ದ ನಾಲ್ಕು ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ.
ಮತ್ತೊಂದು ಅಪಘಾತ ಕಳೆದ ರಾತ್ರಿ 12.30ರ ವೇಳೆ ಸಂಭವಿಸಿದೆ. ಇದರಲ್ಲಿ ಗಾಯಗೊಂಡ ನಾರಂಪಾಡಿ ಬಳಿಯ ಮಾಣಿಮೂಲೆ ನಿವಾಸಿಗಳಾದ ಚಿತ್ರ (31), ಬೇಬಿ (40) ಎಂಬಿವರನ್ನು ಮಂಗಳೂರಿನ ಆಸ್ಪತ್ರೆಯಲ್ಲೂ ಶಿವರಾಮ (23), ಭವ್ಯ (19), ದಿವ್ಯ(19), ಆದರ್ಶ, ಅಶ್ವಿತ್ ಎಂಬಿವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇವರು ಪೇರಾಲ್‌ನಲ್ಲಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಳುತ್ತಿದ್ದರು. ಇವರು ಸಂಚರಿಸಿದ ಆಕ್ಟೋ ಕಾರು ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಈ ಎರಡೂ ಅಪಘಾತಗಳಲ್ಲಿ ಗಾಯಗೊಂಡವರನ್ನು ಸ್ಥಳೀಯ ನವೋದಯ ಫ್ರೆಂಡ್ಸ್ ಕ್ಲಬ್ ಕಾರ್ಯಕರ್ತರು ಹಾಗೂ ನಾಗರಿಕರು ಸೇರಿ ರಕ್ಷಿಸಿ ಆಸ್ಪತ್ರೆಗೆ ತಲುಪಿಸಲು ಸಹಕರಿಸಿದರು. ಭಾಸ್ಕರನಗರದಲ್ಲಿ ಅಪಘಾತಗಳು ಪದೇ ಪದೇ ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.