ಮಂಜೇಶ್ವರ : ಎರಡು ದಿವಸ ಮೊದಲು ಅಪಘಾತಕ್ಕೀಡಾದ ಕಾರಿನಿಂದ ಬ್ಯಾಟ್ರಿ ಕದಿಯುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿ ಕೊಂಡಿದ್ದಾರೆ.ಶನಿವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಎರಡು ದಿವಸಕ್ಕೆ ಮೊದಲು ಮಂಜೇಶ್ವರ ಅಂಡರ್ ಪಾಸಿನಲ್ಲಿ ಸ್ಕೂಟರ್ ಗೆ ಕಾರೊಂದು ಡಿಕ್ಕಿ ಹೊಡೆದು ಅಪಘಾತ ಉಂಟಾಗಿತ್ತು. ಅಪಘಾತಕ್ಕೀಡಾದ ಸ್ಕೂಟರ್ ಸವಾರವನ್ನು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತಕ್ಕೀಡಾದ ಕಾರನ್ನು ಕರೋಡಾ ಮಸೀದಿ ಪರಿಸರದಲ್ಲಿ ನಿಲುಗಡೆಗೊಳಿಸಲಾಗಿತ್ತು.
ಶನಿವಾರ ಮಧ್ಯಾಹ್ನ ಇದೇ ಪರಿಸರದ ವ್ಯಕ್ತಿಯೊಬ್ಬರು ಅದೇ ದಾರಿಯಾಗಿ ಬರುತ್ತಿರುವಾಗ ಹೆಲ್ಮೇಟ್ ಧರಿಸಿದ ಯುವಕನೊಬ್ಬ ಕಾರಿನಿಂದ ಬ್ಯಾಟ್ರಿ ಕದಿಯುತ್ತಿರುವ ದೃಶ್ಯ ಕಂಡು ಬಂದಿದೆ ಎನ್ನಲಾಗಿದೆ. ವಿಚಾರಿಸುವಾಗ ಗ್ಯಾರೇಜ್ ನವನೆಂದು ಹೇಳಿ ಅಲ್ಲಿಂದ ಪರಾರಿಯಾಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ. ಈ ಬಗ್ಗೆ ಮಂಜೇಶ್ವರ ಠಾಣೆಗೆ ದೂರು ಸಲ್ಲಿಸಿರುವುದಾಗಿ ಕಾರು ಮಾಲಕ ಕಲೀಲ್ ಎಂಬವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.