ಕುಂಬಳೆ : ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣ ಪೂರ್ಣಗೊಂಡ ಕುಂಬಳೆ ಮೀನು ಮಾರುಕಟ್ಟೆ ಕಟ್ಟಡವನ್ನು ಇನ್ನೂ ಸಾರ್ವಜನಿಕರಿಗೆ ತೆರೆಯಲು ಕ್ರಮ ಕೈಗೊಳ್ಳಲಾಗಿಲ್ಲ.ಹೊಸ ಪಂಚಾಯತ್ ಆಡಳಿತ ಸಮಿತಿ ಅಧಿಕಾರ ಸ್ವೀಕರಿಸಿದ ಬಳಿಕ ಉದ್ಘಾಟನೆ ನಡೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದ ಮೀನು ಮಾರುಕಟ್ಟೆ, ವಿಧಾನಸಭಾ ಚುನಾವಣೆಯ ಆಚರಣಾ ಸಂಹಿತೆ ಜಾರಿಯಾದರೆ ಮತ್ತೆ ವಿಳಂಬವಾಗುವ ಸಾಧ್ಯತೆ ಇದೆ ಎಂಬ ಆತಂಕ ಮೀನು ಮಾರಾಟ ಕಾರ್ಮಿಕರಲ್ಲಿ ಮೂಡಿದೆ.
ಮೀನು ಮಾರಾಟ ಮಾತ್ರವಲ್ಲದೆ ಮಾಂಸ, ತರಕಾರಿ ಹಾಗೂ ಹಣ್ಣುಗಳ ಮಾರಾಟಕ್ಕೂ ಕಟ್ಟಡದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪಂಚಾಯತ್ ಅಧಿಕಾರಿಗಳು ತಿಳಿಸುತ್ತಿದ್ದರೂ, ಮೀನು ಮಾರಾಟಕ್ಕೆ ಮಾತ್ರವೇ ಈ ಕಟ್ಟಡ ಅಪ್ರಾಪ್ತ್ಯ ಎಂದು ಮೀನುಗಾರರು ಆರೋಪಿಸುತ್ತಿದ್ದಾರೆ.ಇನ್ನೂ ವಿದ್ಯುತ್ ಸಂಪರ್ಕ ಕಾಮಗಾರಿ ಹಾಗೂ ಒಳಚರಂಡಿ ನಿರ್ಮಾಣ ಬಾಕಿಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೀನು ಬುಟ್ಟಿಗಳನ್ನು ತೊಳೆಯುವ ಸ್ಥಳದಿಂದ ಒಳಚರಂಡಿಗೆ ಮಲಿನ ನೀರು ಹರಿಯಲು ಅಗತ್ಯ ವ್ಯವಸ್ಥೆ ಇದುವರೆಗೆ ಮಾಡಲಾಗಿಲ್ಲ. ಉದ್ಘಾಟನೆ ವಿಳಂಬವಾಗಿರುವ ಪ್ರಮುಖ ಕಾರಣ ಇದಾಗಿದೆ.
ಉದ್ಘಾಟನೆ ತಡವಾಗುತ್ತಿರುವುದರಿಂದ ರಸ್ತೆಯಲ್ಲೇ ವ್ಯಾಪಾರ ನಡೆಯುತ್ತಿದ್ದು, ಇದರಿಂದ ಸಂಚಾರ ದಟ್ಟಣೆ ಮತ್ತು ವ್ಯಾಪಾರಿಗಳಿಗೆ ತೊಂದರೆ ಉಂಟಾಗುತ್ತಿದೆ. ಮೀನು ಮಾರಾಟ ಕಾರ್ಮಿಕರು ಹಾಗೂ ಇತರ ವ್ಯಾಪಾರಿಗಳ ನಡುವೆ ಪದೇಪದೇ ಕಲಹ ಉಂಟಾಗುವುದು ಸಾಮಾನ್ಯವಾಗಿದೆ.ಮೀನು ಮಾರುಕಟ್ಟೆ ತೆರೆಯಲ್ಪಟ್ಟರೆ ತಮ್ಮ ಸಂಕಷ್ಟ ನಿವಾರಣೆಯಾಗುತ್ತದೆ ಎಂಬ ನಿರೀಕ್ಷೆಯನ್ನು ವ್ಯಾಪಾರಿಗಳು ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಅಭಿವೃದ್ಧಿ ನಿಧಿಯನ್ನು ಬಳಸಿ ಈ ಮಾರುಕಟ್ಟೆ ಕಟ್ಟಡವನ್ನು ನಿರ್ಮಿಸಲಾಗಿದೆ.
ಚುನಾವಣಾ ವೇಳೆಯಲ್ಲಿ ರಾಜಕಾರಣಿಗಳು ಹಲವಾರು ಭರವಸೆಗಳನ್ನು ನೀಡಿದರೂ, ಬಳಿಕ ಗಮನ ಹರಿಸುವುದಿಲ್ಲ ಎಂದು ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.