ಕಣ್ಣೂರು ರೈಲು ನಿಲ್ದಾಣದಲ್ಲಿ ಆರೋಗ್ಯ ಸಚಿವೆ ಮೇಲೆ ದಾಳಿ: ಕೊರಳಿಗೆ ಗಂಭೀರ ಗಾಯ, ಎಂಆರ್‌ಐ ಸಲಹೆ

ಕಾಸರಗೋಡು: ಕಣ್ಣೂರು ರೈಲು ನಿಲ್ದಾಣದಲ್ಲಿ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ ಕೆ. ಎಸ್. ಯು ನೇತೃತ್ವದಲ್ಲಿ ಆರೋಗ್ಯ ಸಚಿವೆ ವಿರುದ್ಧ ಕರಿಪತಾಕೆ ಪ್ರದರ್ಶನದ ಪ್ರತಿಭಟನೆಯ ಮರೆಯಲ್ಲಿ ಸಚಿವೆಯ ಮೇಲೆ ನಡೆದ ಆಕ್ರಮಣ ಕೇರಳಾದ್ಯಂತ ವ್ಯಾಪಕ ಪ್ರತಿಭಟನೆಗೆ ಗುರಿಯಾಗಿದೆ.

ರೈಲು ನಿಲ್ದಾಣದಲ್ಲಿ ರೈಲನ್ನೇರಲು ಹೋಗುವ ಸಂದರ್ಭ ಸಚಿವೆಯನ್ನು ಆಕ್ರಮಿಸಿ ಗಾಯಗೊಳಿಸಲಾಗಿದ್ದು, ಸಚಿವೆಗೆ ಗಂಭೀರ ಏಟುಗಳಾಗಿವೆ. ಆಕ್ರಮಣದ ಬೆನ್ನಲ್ಲೇ ಕಣ್ಣೂರು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾದ ಆರೋಗ್ಯ ಸಚಿವೆ ಯ ಆರೋಗ್ಯ ಸ್ಥಿತಿಯ ಕುರಿತು ಮೆಡಿಕಲ್ ಬುಲೆಟಿನ್ ಪ್ರಕಟಿಸಲಾಗಿದ್ದು, ಸಚಿವೆಯ ಕೊರಳಿಗೆ ಏಟಿನ ಗಾಯಗಳಾಗಿವೆ ಎಂದು ಬುಲೆಟಿನ್ ವರದಿ ಮಾಡಿದೆ.

ತಜ್ಞ ವೈದ್ಯರ ನಿಯೋಗ ಸಚಿವೆಯ ಆರೋಗ್ಯ ತಪಾಸಿಸಿದ ಬಳಿಕ ಎಂಆರ್ ಐ ಸ್ಕ್ಯಾನಿಂಗ್ ಅಗತ್ಯವೆಂದೂ, ಕೊರಳಿಗೆ ಬಲವಾದ ಏಟಾಗಿದೆಯೆಂದೂ ಮೆಡಿಕಲ್ ರಿಪೋರ್ಟ್ ಪ್ರಕಟಿಸಿದೆ. ಬುಧವಾರ ಅಪರಾಹ್ನ ವಂದೇ ಭಾರತ್ ರೈಲಿನಲ್ಲಿ ತಿರುವನಂತಪುರಕ್ಕೆ ತೆರಳಲೆಂದು ಸಚಿವೆ ಕಣ್ಣೂರು ರೈಲು ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಕೆಎಸ್ ಯು ನೇತೃತ್ವದಲ್ಲಿ ಪ್ರತಿಭಟನೆಯ ಮರೆಯಲ್ಲಿ ಆಕ್ರಮಣ ನಡೆದಿತ್ತು. ಕೂಡಲೇ ಆಸ್ಪತ್ರೆಗೆ ಸೇರಿಸಲಾದ ಅವರನ್ನು ಬಳಿಕ ತುರ್ತು ನಿಗಾ ಘಟಕಕ್ಕೆ ಮತ್ತು ಅನಂತರ ಐಸಿಯುಗೆ ಸೇರಿಸಲಾಯಿತು.

ಬುಧವಾರ ಸಂಜೆ 4ರ ವೇಳೆಗೆ ಈ ಘಟನೆ ನಡೆಯಿತು. ಕಣ್ಣೂರಿನಲ್ಲಿ ಆರೋಗ್ಯ ಸಚಿವೆಯ ಮೇಲೆ ನಡೆದ ಆಕ್ರಮಣವನ್ನು ಸಿಪಿಐಎಂ ರಾಜ್ಯ ವ್ಯಾಪಕವಾಗಿ ಬುಧವಾರ ಸಂಜೆಯೇ ಪ್ರತಿಭಟಿಸಿ ಬೀದಿಗಿಳಿದು ರಂಗಕ್ಕೆ ಬಂದಿದೆ. ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಣ್ಣೂರು ಸರಕಾರಿ ಆಸ್ಪತ್ರೆಗೆ ಖುದ್ದು ದೌಡಾಯಿಸಿ ಆರೋಗ್ಯ ಸಚಿವೆಯ ಆರೋಗ್ಯ ವಿಚಾರಿಸಿ, ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯ ದುಷ್ಕೃತ್ಯವನ್ನು ಖಂಡಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!