ಕಾಸರಗೋಡು: ಬಂಧಿಸಲು ಪ್ರಯತ್ನಿಸುವ ವೇಳೆ ಮಹಿಳಾ ಪೊಲೀಸ್ ಅಧಿಕಾರಿಯ ಕೈಬೆರಳನ್ನು ಮುರಿದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಹೊಸಬೆಟ್ಟು ನಿವಾಸಿ ಮೊಯ್ನುದ್ದೀನ್ ಝಮಾನ್ (33) ನನ್ನು ಮಂಜೇಶ್ವರ ಪೊಲೀಸ್ ಇನ್ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ಹಾಗೂ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ಮುಂಜಾನೆ ಮಂಗಳೂರು ಕಲ್ಲಾಪು ತರಕಾರಿ ಮಾರುಕಟ್ಟೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಮಾರುಕಟ್ಟೆಯಲ್ಲಿ ಆರೋಪಿಯಿರುವ ಮಾಹಿತಿ ದೊರೆತ ಹಿನ್ನೆಲೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಈ ಪ್ರಕರಣದ ಸಹಆರೋಪಿಗಳಾದ ಮಂಜೇಶ್ವರ ಪಿರಾರಮೂಲೆಯ ಹ್ಯಾರಿಸ್ (40) ಹಾಗೂ ಬಡಾಜೆ ಕಾಜೂರು ಮಾಲಿಯ ಟಿ.ಕೆ. ಮೊಹಮ್ಮದ್ ಫೈಸಲ್ (43) ನನ್ನು ಈಗಾಗಲೇ ಬಂಧಿಸಲಾಗಿದ್ದು ಪ್ರಕರಣದಲ್ಲಿ ಇನ್ನೂ ಒಬ್ಬ ಆರೋಪಿ ಪತ್ತೆಯಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.2026 ಜನವರಿ 14ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಹೊಸಂಗಡಿಯಲ್ಲಿ ಘಟನೆ ಸಂಭವಿಸಿದೆ . ಉಳ್ಳಾಳ ತಾಲೂಕಿನ ಕೈರಂಗಲ ನಿವಾಸಿ ಮೊಹಮ್ಮದ್ ಹನೀಫ್ (41) ಮತ್ತು ಅವರ ಮಹಿಳಾ ಸ್ನೇಹಿತೆ ದಕ್ಷಿಣ ಕನ್ನಡ ಜಿಲ್ಲೆಯ ನಾಟಕಲ್ಲಿನ ಇಸ್ರತ್ (30) ಇವರ ಮೇಲೆ ದೌರ್ಜನ್ಯ ಎಸಗಲಾಗಿದೆ.
ಇವರಿಬ್ಬರು ಇದ್ದ ಕೋಣೆಗೆ ನುಗ್ಗಿದ ಗುಂಪು, ಅವರನ್ನು ಹಾಸಿಗೆಯಲ್ಲಿ ಒಟ್ಟಿಗೆ ಕೂಳ್ಳಿರಿಸಿ ಅರ್ಧನಗ್ನ ವಿಡಿಯೋ ಹಾಗೂ ಫೋಟೋಗಳನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿ, ಎರಡು ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದರೆಂದು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣ ನೀಡದಿದ್ದರೆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಸಿ, 5000 ರೂ. ಹಾಗೂ ಮೊಬೈಲ್ ಫೋನ್ ಕಸಿದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಗುರುತಿಸಿದ ಬಳಿಕ ಬಂಧಿಸಲು ಮಂಗಳೂರು ತೆರಳಿದಾಗ, ಮಂಜೇಶ್ವರ ಪೊಲೀಸ್ ಠಾಣೆಯ ಮಹಿಳಾ ಸಿವಿಲ್ ಪೊಲೀಸ್ ಅಧಿಕಾರಿ ಅವರ ಕೈಬೆರಳನ್ನು ಮುರಿದು ಮೊಯ್ನುದ್ದೀನ್ ಝಮಾನ್ ಪರಾರಿಯಾಗಿದ್ದ. ಕಾರ್ಯಾಚರಣೆಯಲ್ಲಿ ಎಸ್ಐಗಳಾದ ಕೆ.ಆರ್. ಉಮೇಶ್, ರತೀಶ್ ಹಾಗೂ ಶಬರಿ ಕೃಷ್ಣ ಭಾಗಿಯಾಗಿದ್ದರು.