ಕೊಂಡೆವೂರು ಮಠದಲ್ಲಿ ಪ್ರತಿಷ್ಠಾ ವರ್ಧಂತಿ ಹಾಗೂ ನವ ಚಂಡಿಕಾ ಯಾಗ ಸಮಾಪ್ತಿ

ಕೊಂಡೆವೂರು ಮಠದ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶ್ರೀ ಗಾಯತ್ರಿ ದೇವಿ ಹಾಗೂ ಭಗವಾನ್ ಶ್ರೀ ನಿತ್ಯಾನಂದ ಗುರುದೇವರ ಪ್ರತಿಷ್ಠಾ ವರ್ಧಂತಿ ಮಹೋತ್ಸವ, “ನವ ಚಂಡಿಕಾ ಯಾಗ” ಮತ್ತು ಶ್ರೀ ಗಾಯತ್ರಿ ದೇವಿಯ ಗರ್ಭಗುಡಿಯ ಜೀರ್ಣೋದ್ಧಾರಕ್ಕಾಗಿ ನಿಧಿ ಸಮರ್ಪಣಾ ಕಾರ್ಯಕ್ರಮವು 2026 ಫೆಬ್ರವರಿ 22ರಂದು ಭಕ್ತಿಭಾವಪೂರ್ಣವಾಗಿ ಯಶಸ್ವಿಯಾಗಿ ನೆರವೇರಿತು.

ಈ ಎಲ್ಲಾ ಕಾರ್ಯಕ್ರಮಗಳು ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಶ್ರೀ ಕ್ಷೇತ್ರ ಕಟೀಲು ಪರಂಪರ ಮುಖ್ಯ ಅರ್ಚಕರಾದ ಬ್ರಹ್ಮಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣ ಅವರ ನೇತೃತ್ವದಲ್ಲಿ ವಿವಿಧ ವೈದಿಕ ವಿಧಿವಿಧಾನಗಳೊಂದಿಗೆ ನಡೆಯಿತು.

ನಡೆದ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕಟೀಲಿನ ಮುಖ್ಯ ಅರ್ಚಕರಾದ ಶ್ರೀ ಅನಂತಪದ್ಮನಾಭ ಅಸ್ರಣ್ಣ ಉಪಸ್ಥಿತರಿದ್ದು, ಮಾಜಿ ರಾಜ್ಯಸಭಾ ಸದಸ್ಯರು ಹಾಗೂ ಐಪಿಎಸ್ ನಿವೃತ್ತ ಅಧಿಕಾರಿಯಾದ ಶ್ರೀ ಕೆ.ಸಿ. ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶ್ರೀ ಕೆ.ಸಿ. ರಾಮಮೂರ್ತಿಯವರು ಸ್ವಾಮೀಜಿಯವರ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಳನ್ನು ಶ್ಲಾಘಿಸಿ, ಭವಿಷ್ಯದ ಯೋಜನೆಗಳಿಗೆ ಸಾರ್ವಜನಿಕರು ಸಹಕಾರ ನೀಡುವಂತೆ ಕರೆ ನೀಡಿದರು.

ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ, ಅನಾಥಾಶ್ರಮವಾಗಿ ಆರಂಭವಾದ ಆಶ್ರಮವು ಇಂದು ಸಂಕಷ್ಟದಲ್ಲಿರುವವರಿಗೆ ಆಶ್ರಯ ನೀಡುವ ಮಹಾವೃಕ್ಷವಾಗಿ ಬೆಳೆದಿದೆ ಎಂದು ತಿಳಿಸಿದರು.

“ಆಶ್ರಯ” ಯೋಜನೆಯಡಿ ಈಗಾಗಲೇ 47 ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಲಾಗಿದ್ದು, ದಾನಿಗಳ ಸಹಕಾರದಿಂದ ಇನ್ನೂ 5 ಮನೆಗಳನ್ನು ಶೀಘ್ರದಲ್ಲೇ ನಿರ್ಮಿಸಿ ನೀಡಲಾಗುವುದು ಎಂದು ಹೇಳಿದರು. ಜೊತೆಗೆ ಶ್ರೀ ಗಾಯತ್ರಿ ದೇವಿಯ ಗರ್ಭಗುಡಿಯ ಜೀರ್ಣೋದ್ಧಾರ ಸಮಿತಿಯನ್ನು ಅಧಿಕೃತವಾಗಿ ಘೋಷಿಸಲಾಯಿತು.

ಜೀರ್ಣೋದ್ಧಾರ ಹಾಗೂ ಸಹಕಾರ

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಬೆಂಗಳೂರು ರಾಜ್ಯಸಭಾ ಸದಸ್ಯ ಶ್ರೀ ಕೆ. ನಾರಾಯಣ ಅವರು, ಸ್ವಾಮೀಜಿಯವರು ಭವಿಷ್ಯದ ಪೀಳಿಗೆಯ ಹಿತಕ್ಕಾಗಿ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸಿಸಿ, ಈ ಮಹತ್ವದ ಕಾರ್ಯವನ್ನು ಮುಂದಿನ ವರ್ಷ ಪೂರ್ಣಗೊಳಿಸಲು ಎಲ್ಲರೂ “ವೃಕ್ಷದ ಬೇರುಗಳಂತೆ” ಸಹಕರಿಸಬೇಕು ಎಂದು ಮನವಿ ಮಾಡಿದರು.

ಬೆಂಗಳೂರು ಆಕ್ಸ್ಫರ್ಡ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಸ್.ಎನ್.ವಿ.ಎಲ್. ನರಸಿಂಹ ರಾಜು ಅವರು ಹೊಸ ಗರ್ಭಗುಡಿಯ ನಿರ್ಮಾಣಕ್ಕಾಗಿ ನಿಧಿ ಸಮರ್ಪಣಾ ಕೂಪನ್‌ಗಳನ್ನು ಬಿಡುಗಡೆ ಮಾಡಿದರು.

ಸನ್ಮಾನ ಹಾಗೂ ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ 2026ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಸಂಸ್ಥಾಪಕಿ ಶ್ರೀಮತಿ ಎಸ್.ಜಿ. ಸುಶೀಲಮ್ಮ ಅವರನ್ನು ಸನ್ಮಾನಿಸಲಾಯಿತು.

ಸಿ.ಎಫ್. ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಶೆಟ್ಟಿ ಮುಂಡ್ಕೂರು ಅವರು ಜೀರ್ಣೋದ್ಧಾರಗೊಂಡ ಮನೆಯನ್ನು ಹಸ್ತಾಂತರಿಸಿದರು.

CAPS ಫೌಂಡೇಶನ್ ಸಹಕಾರದಲ್ಲಿ ಇನ್ನೂ 3 ಮನೆಗಳ ಆಯ್ಕೆ ಪತ್ರಗಳನ್ನು ವಿತರಿಸಲಾಯಿತು. ಮುಂಬೈನ ಹೆರಂಬ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಘುರಾಮ ಕೆ. ಶೆಟ್ಟಿ ಅವರು ಮತ್ತೊಂದು ಮನೆ ದಾನವಾಗಿ ನೀಡಿ ಆಯ್ಕೆ ಪತ್ರವನ್ನು ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ನಿವೃತ್ತ ಡಿಸಿ ಶ್ರೀ ಬಿ. ನಾಗರಾಜ, ಮುಂಬೈ ಉದ್ಯಮಿ ಶ್ರೀ ಮೋಹನ ಶೆಟ್ಟಿ ಮಜ್ಜಾರ್, ಶ್ರೀ ಶಶಿಧರ ಶೆಟ್ಟಿ ಗ್ರಾಮ ಚಾವಡಿ, ಶ್ರೀ ರಾಜೇಶ್ ಕೆ. ರೈ (ಮುಂಬೈ ಸಮಿತಿ), ಶ್ರೀ ಬಾಲಕೃಷ್ಣ (ಬೆಂಗಳೂರು), ಸುಪ್ರೀಂ ಕೋರ್ಟ್ ವಕೀಲರಾದ ಶ್ರೀ ಅನುಜ್ ವೀರೇಂದ್ರ ಸಿಂಗ್ ಕಾರ್ಡಿಯನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಮಧ್ಯಪ್ರದೇಶದ ಯತಿ ವಿನಯಸಾಗರ ಸ್ವಾಮೀಜಿಯವರೂ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಸಂಜೆ ಕಾರ್ಯಕ್ರಮವು ಶ್ರೀ ತಸ್ಮಯ ಆಚಾರ್ಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡು, ಶ್ರೀ ಪುರುಷೋತ್ತಮ ಅಡ್ಯಾರ್ ಸ್ವಾಗತಿಸಿದರು. ಶ್ರೀ ಕೆ.ಎಂ. ಗಂಗಾಧರ ಕೊಂಡೇವೂರು ಕಾರ್ಯಕ್ರಮ ನಿರೂಪಣೆ ನಡೆಸಿದರು.

ಸಂಜೆ 6:30ಕ್ಕೆ ನಕ್ಷತ್ರವನದಲ್ಲಿ ನವಗ್ರಹ ಪೂಜೆ ಹಾಗೂ ದೀಪೋತ್ಸವ ನಡೆಯಿತು. ಸೂರ್ಯಾಸ್ತದ ವೇಳೆ ಸಂಜೆ 6:37ಕ್ಕೆ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ದೀಪ ಬೆಳಗುವ ಮೂಲಕ 20ನೇ ವರ್ಷದ ಅಖಂಡ ಭಜನಾ ಸಪ್ತಾಹವನ್ನು ಅಧಿಕೃತವಾಗಿ ಉದ್ಘಾಟಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!