ಮಂಜೇಶ್ವರ: ಮಂಜೇಶ್ವರ ಒಳಪೇಟೆಯ ದಕ್ಷಿಣ ಭಾಗದಲ್ಲಿ ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕ ಸ್ಥಳದಲ್ಲಿರುವ ಚರಂಡಿಗೆ ಖಾಸಗಿ ವಸತಿ ಸಮುಚ್ಚಯವೊಂದರ ಶೌಚಾಲಯದ ತ್ಯಾಜ್ಯ ನೀರನ್ನು ನೇರವಾಗಿ ಹರಿಬಿಡಲಾಗುತ್ತಿದ್ದು, ಸ್ಥಳೀಯರು ಹಾಗೂ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಆರೋಗ್ಯಾಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಕಂಡೂ ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಹಲವು ರೀತಿಯ ಅನುಮಾನಕ್ಕೆ ಕಾರಣವಾಗಿದೆ.
ಮಂಜೇಶ್ವರ ಒಳಪೇಟೆಯ ದಕ್ಷಿಣ ಭಾಗದ ಅಂಗಡಿ ಮುಂಭಾಗ ಹಾಗೂ ಬಸ್‌ಗಾಗಿ ಪ್ರಯಾಣಿಕರು ಕಾಯುವ ಜಾಗದ ಸಮೀಪದಲ್ಲೇ ಈ ಅವಾಂತರ ಸೃಷ್ಟಿಯಾಗಿದೆ. ಮಳೆ ನೀರು ಹರಿದು ಹೋಗಬೇಕಾದ ಚರಂಡಿಗೆ ಸಮೀಪದ ಖಾಸಗಿ ವಸತಿ ಸಮುಚ್ಚಯದಿಂದ ಕಕ್ಕೂಸ್ ತ್ಯಾಜ್ಯ ನೀರನ್ನು ಅಕ್ರಮವಾಗಿ ಹರಿಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಿದ ಬೆನ್ನಲ್ಲೇ, ಸತ್ಯಾಂಶವನ್ನು ಮುಚ್ಚಿ ಹಾಕಲು ವ್ಯಕ್ತಿಯೊಬ್ಬರು ಯಾವುದೇ ಇಲಾಖೆಯ ಅನುಮತಿ ಪಡೆಯದೆ ಚರಂಡಿಯ ಮೇಲೆ ರಾತ್ರೋರಾತ್ರಿ ಕಾಂಕ್ರೀಟ್ ಹಾಕಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮೇಲ್ನೋಟಕ್ಕೆ ತ್ಯಾಜ್ಯ ನೀರು ಕಾಣದಂತೆ ಕಾಂಕ್ರೀಟ್ ಹಾಕಲಾಗಿದ್ದರೂ, ಅದರ ಅಡಿಭಾಗದಿಂದ ಮಲಿನ ನೀರು ಸತತವಾಗಿ ಹರಿಯುತ್ತಲೇ ಇದೆ. ಇದರಿಂದಾಗಿ
ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರು ಮತ್ತು ಬಸ್‌ಗಾಗಿ ಕಾಯುವ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಓಡಾಡುವಂತಾಗಿದೆ.
ಮಲಿನ ಜಲವು ಸಾರ್ವಜನಿಕ ಸ್ಥಳದಲ್ಲಿ ಹರಿಯುತ್ತಿರುವುದರಿಂದ ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಸರ್ಕಾರಿ ಜಾಗದಲ್ಲಿ ಅನುಮತಿ ಇಲ್ಲದೆ ಕಾಂಕ್ರೀಟ್ ಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಾಗಿದೆ. ಅನಧಿಕೃತವಾಗಿ ತ್ಯಾಜ್ಯ ನೀರು ಬಿಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಕಾಂಕ್ರೀಟ್ ತೆರವುಗೊಳಿಸಿ ಚರಂಡಿಯನ್ನು ಸ್ವಚ್ಛಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.