ಬಂದ್ಯೋಡ್: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಬಂದ್ಯೋಡ್ ಪ್ರದೇಶದಲ್ಲಿ ಕಟ್ಟಡ ಮಾಲೀಕರು ಮತ್ತು ವ್ಯಾಪಾರಿಗಳು ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿಕೊಂಡಿರುವ ಪರಿಣಾಮ ಸಾರ್ವಜನಿಕರಿಗೆ ನಡೆದು ಹೋಗಲು ತೀವ್ರ ತೊಂದರೆ ಉಂಟಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ಇದರಿಂದ ಜನರು ರಸ್ತೆ ಮೇಲೆ ಇಳಿದು ನಡೆದು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಹೆಚ್ಚಿನ ಅಂಗಡಿ ಮಾಲೀಕರು ಅಂಗಡಿಗಳ ಒಳಗೆ ಇರಬೇಕಾದ ವಸ್ತುಗಳನ್ನು ಹೊರಗೆ ಇಟ್ಟು ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಪಾದಚಾರಿ ಮಾರ್ಗ ಬಳಕೆ ಅಸಾಧ್ಯವಾಗಿದ್ದು, ಅಪಘಾತದ ಭೀತಿ ಹೆಚ್ಚಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಇದರೊಂದಿಗೆ ಕೆಲವು ಅಂಗಡಿಗಳಲ್ಲಿ ಇಚ್ಛೆಯಂತೆ ಬೆಲೆ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಲೀಗಲ್ ಮೆಟ್ರಾಲಜಿ ಇಲಾಖೆಯ ವತಿಯಿಂದ ಕಟ್ಟುನಿಟ್ಟಿನ ಪರಿಶೀಲನೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇನ್ನೂ ಕೆಲ ಅಂಗಡಿಗಳ ಮುಂದೆ ರಾಷ್ಟ್ರೀಯ ಹೆದ್ದಾರಿ (NH) ವ್ಯಾಪ್ತಿಯ ಜಾಗವನ್ನು ಅತಿಕ್ರಮಿಸಿಕೊಂಡು ಇಂಟರ್‌ಲಾಕ್ ಅಳವಡಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಎಲ್ಲಾ ಅತಿಕ್ರಮಣ ಮತ್ತು ಅಕ್ರಮ ಚಟುವಟಿಕೆಗಳ ವಿರುದ್ಧ ಮಂಗಲ್ಪಾಡಿ ಪಂಚಾಯತ್ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.