ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್‌ನ 2026-27ನೇ ಹಣಕಾಸು ವರ್ಷದ ಬಜೆಟ್ ಉಪಾಧ್ಯಕ್ಷೆ ಫಾತಿಮತ್ ಸಹುರಾ ಮಂಡಿಸಿದರು. ಗ್ರಾಮೀಣ ಭಾಗದ ಮೂಲಸೌಕರ್ಯ ಅಭಿವೃದ್ಧಿ, ತ್ಯಾಜ್ಯ ಮುಕ್ತ ಮಂಜೇಶ್ವರ ಮತ್ತು ಕುಡಿಯುವ ನೀರಿಗೆ ಈ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ಅವರು ಆಮುಖ್ಯ ಭಾಷಣ ಮಾಡಿ, ಮಂಜೇಶ್ವರದ ಭೌತಿಕ ಚಿತ್ರಣವನ್ನು ಬದಲಿಸುವ ಮತ್ತು ಜನರ ಜೀವನಮಟ್ಟವನ್ನು ಸುಧಾರಿಸುವ ಗುರಿಯನ್ನು ಈ ಬಜೆಟ್ ಹೊಂದಿದೆ ಎಂದು ತಿಳಿಸಿದರು.
ಒಟ್ಟು ನಿರೀಕ್ಷಿತ ಆದಾಯ: 37,73,53,000 (37.73 ಕೋಟಿ ರೂ.) ಒಟ್ಟು ನಿರೀಕ್ಷಿತ ವೆಚ್ಚ: 37,61,90,000 (37.61 ಕೋಟಿ ರೂ.)
ಉಳಿತಾಯ: 65,53,561 ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಮುಖ ಸ್ಥಳಗಳನ್ನು ‘ಸ್ಮಾರ್ಟ್ ಟೌನ್’ಗಳಾಗಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಬಜೆಟ್‌ನಲ್ಲಿ ಚಾಲನೆ ನೀಡಲಾಗಿದೆ. ಮೊದಲ ಹಂತವಾಗಿ ಹೊಸಂಗಡಿ, ಮಂಜೇಶ್ವರ, ತೂಮಿನಾಡು, ಕುಂಜತ್ತೂರು ಮತ್ತು ಹೊಸಬೆಟ್ಟು ಪ್ರದೇಶಗಳನ್ನು 2026-27ರಲ್ಲಿ ಸ್ಮಾರ್ಟ್ ಟೌನ್‌ಗಳಾಗಿ ಪರಿವರ್ತಿಸಲಾಗುವುದು.
ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಸಂಪೂರ್ಣ ಪಂಚಾಯತ್ ಅನ್ನು ತ್ಯಾಜ್ಯ ಮುಕ್ತಗೊಳಿಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ವಿಶೇಷ ಅನುದಾನವನ್ನು ಮೀಸಲಿಡಲಾಗಿದೆ. ಒಳನಾಡು ರಸ್ತೆಗಳ ನವೀಕರಣ ಮತ್ತು ಇತರ ಮೂಲಸೌಕರ್ಯಗಳ ಮೂಲಕ ಪಂಚಾಯತ್‌ನ ಮುಖಪುಟವನ್ನೇ ಬದಲಾಯಿಸಲು ಉದ್ದೇಶಿಸಲಾಗಿದೆ.
ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೂ ಬಜೆಟ್‌ನಲ್ಲಿ ಸೂಕ್ತ ಪ್ರಾಮುಖ್ಯತೆ ನೀಡಲಾಗಿದ್ದು, ಇದು ಮಂಜೇಶ್ವರದ ಸಮಗ್ರ ಪ್ರಗತಿಗೆ ದಾರಿಯಾಗಲಿದೆ ಎಂದು ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ವಿಶ್ವಾಸ ವ್ಯಕ್ತಪಡಿಸಿದರು.