ಮಂಜೇಶ್ವರ: ಸಮಗ್ರ ಹಾಗೂ ಸರ್ವತೋಮುಖ ಅಭಿವೃದ್ಧಿಯ ಮೂಲಕ ‘ನವಕೇರಳ’ ನಿರ್ಮಾಣದ ಆಶಯದೊಂದಿಗೆ ಮಂಜೇಶ್ವರ ಬ್ಲಾಕ್ ಪಂಚಾಯತ್‌ನ 2026-27ನೇ ಸಾಲಿನ ಬಜೆಟ್ ಮಂಡಿಸಲಾಯಿತು. ಬ್ಲಾಕ್ ಪಂಚಾಯತ್ ಅಧ್ಯಕ್ಷ ಸೈಪುಲ್ಲಾ ತಂಘಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷೆ ಕಮಲಾಕ್ಷಿ ಅವರು ಬಜೆಟ್‌ನ್ನು ಮಂಡಿಸಿದರು.
ಹೊಸ ಆಡಳಿತ ಸಮಿತಿ ಅಧಿಕಾರಕ್ಕೆ ಬಂದ ಬಳಿಕ ಮಂಡನೆಯಾದ ಮೊದಲ ಬಜೆಟ್ ಇದಾಗಿದ್ದು, ಸಾರ್ವಜನಿಕರ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಯನ್ನು ದೀರ್ಘಕಾಲಿಕ ದೃಷ್ಟಿಕೋನದಲ್ಲಿ ಪರಿಗಣಿಸಿ ‘ಜನಕೀಯ ಬಜೆಟ್’ ರೂಪಿಸಲಾಗಿದೆ ಎಂದು ತಿಳಿಸಲಾಯಿತು. 2026-27ನೇ ಸಾಲಿಗೆ ಒಟ್ಟು ₹19,65,58,000 ಆದಾಯ ಹಾಗೂ ₹19,46,35,000 ವೆಚ್ಚವನ್ನು ಅಂದಾಜಿಸಲಾಗಿದೆ. ವರ್ಷದ ಅಂತ್ಯಕ್ಕೆ ಸುಮಾರು ₹19,23,000 ಉಳಿತಾಯ ನಿರೀಕ್ಷಿಸಲಾಗಿದೆ. ಈ ಬಜೆಟ್‌ನಲ್ಲಿ ವಸತಿ ಯೋಜನೆ, ಆರೋಗ್ಯ ಸೇವೆಗಳು, ಸ್ವಚ್ಛತೆ ಹಾಗೂ ತ್ಯಾಜ್ಯ ಸಂಸ್ಕರಣೆ ಕ್ಷೇತ್ರಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ.
ಪ್ರತಿಯೊಂದು ಕ್ಷೇತ್ರವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ, ಜನಸಾಮಾನ್ಯರ ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ಗುರಿ ಹೊಂದಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ‘ನವಕೇರಳ’ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದ ಆಡಳಿತ ಮಂಡಳಿ, ಈ ಬಜೆಟ್ ಬ್ಲಾಕ್ ಪಂಚಾಯತ್ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗೆ ದಿಕ್ಕು ತೋರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.