ಮಂಜೇಶ್ವರ: ಹಿಂದೂ ಸಂಗಮ ಆಯೋಜನ ಸಮಿತಿ ಮಂಜೇಶ್ವರ ಪಂಚಾಯತ್ ವತಿಯಿಂದ ಮಂಜೇಶ್ವರ ಹಿಂದೂ ಸಂಗಮ ಕಾರ್ಯಕ್ರಮವು ಮಾರ್ಚ್ 8ರಂದು ಎಸ್.ಎ.ಟಿ. ಶಾಲಾ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಸಂಜೆ 3 ಗಂಟೆಗೆ ಶ್ರೀಮತ್ ಅನಂತೇಶ್ವರ ದೇವಾಲಯದ ವಠಾರದಿಂದ ಭವ್ಯ ಶೋಭಾಯಾತ್ರೆ ಆರಂಭವಾಯಿತು. ಶೋಭಾಯಾತ್ರೆಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ತಂಡಗಳು ಭಾಗವಹಿಸಿ ಮಂಜೇಶ್ವರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಳಿಕ ಎಸ್.ಎ.ಟಿ. ಶಾಲಾ ಮೈದಾನಕ್ಕೆ ಆಗಮಿಸಿತು. ನಂತರ ಆದರ್ಶ ವ್ಯಕ್ತಿಗಳ ಅನಾವರಣ ಕಾರ್ಯಕ್ರಮ ನಡೆಯಿತು. ಬಳಿಕ ಸಾಮೂಹಿಕವಾಗಿ ವಂದೇ ಮಾತರಂ ಗಾಯನ ನಡೆಸಲಾಯಿತು.
ಸಂಜೆ 4 ಗಂಟೆಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಜ್ರದೇಹಿ ಮಠ ಗುರುಪುರ ಸ್ವಾಮೀಜಿಗಳಾದ ರಾಜಶೇಖರಾನಂದ ಗರುಗಳು, ವಿವಿಧ ಧಾರ್ಮಿಕ ಮುಖಂಡರು ಹಾಗೂ ಗಣ್ಯರು ಭಾಗವಹಿಸಿ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜಶೇಖರಾನಂದ ಸ್ವಾಮೀಜಿ, ಮಕ್ಕಳಲ್ಲಿ ಸಂಸ್ಕಾರ ತುಂಬುವುದು ಹಿರಿಯರ ಕರ್ತವ್ಯವಾಗಿದ್ದು ಹಿಂದೂ ಧರ್ಮವನ್ನು ನಾವು ತಾವೇ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದ ಅಡ್ವಕೇಟ್ ಸಹನಾ ಕುಂದರ್ ಸೋಡಾ ಮಾತನಾಡಿ, ಇಂದಿನ ಕಾಲದಲ್ಲಿ ಹೆತ್ತವರ ಮೊಬೈಲ್ ಬಳಕೆಯಿಂದ ಮಕ್ಕಳು ಯಾವ ದಾರಿಯಲ್ಲಿ ಸಾಗುತ್ತಿದ್ದಾರೆ ಎಂಬುದನ್ನು ಗಮನಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳಲ್ಲಿ ಭಜನೆ ಹಾಗೂ ಧಾರ್ಮಿಕ ಚಟುವಟಿಕೆಗಳ ಬಗ್ಗೆ ಆಸಕ್ತಿ ಬೆಳೆಸಿದಲ್ಲಿ ಸಮಾಜದಲ್ಲಿ ಏಕತೆ ಹೆಚ್ಚುತ್ತದೆ. ನಮ್ಮ ಧರ್ಮದ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿದರೆ ಹಿಂದೂ ಧರ್ಮ ಎಂದಿಗೂ ಕುಗ್ಗುವುದಿಲ್ಲ ಎಂದು ಹೇಳಿದರು.
ಹಿಂದೂ ಸಮಾಜದಲ್ಲಿ ಏಕತೆ, ಸಂಸ್ಕೃತಿ ಮತ್ತು ಧಾರ್ಮಿಕ ಮೌಲ್ಯಗಳನ್ನು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಹಿಂದೂ ಸಂಗಮ ಸಮಿತಿಯ ಸಂಚಾಲಕ ಮಹಾಬಲೇಶ್ವರ, ಹರೀಶ್ ಶೆಟ್ಟಿ ಮಾಡ, ಬಡಾಜೆ ಬೀಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ, ಹಿಂದೂ ಸಂಗಮ ಸಮಿತಿಯ ಅಧ್ಯಕ್ಷ ಮೋಹನ್ ಶೆಟ್ಟಿ ತುಮಿನಾಡು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಂಜೇಶ್ವರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಮತ್ತು ಸಾರ್ವಜನಿಕರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ಯಶಸ್ಸಿಗಾಗಿ ಹಿಂದೂ ಸಂಗಮ ಆಯೋಜನ ಸಮಿತಿಯ ಸದಸ್ಯರು ಹಾಗೂ ಸ್ವಯಂಸೇವಕರು ಅಗತ್ಯ ಸಿದ್ಧತೆಗಳನ್ನು ಸಮರ್ಪಕವಾಗಿ ನಿರ್ವಹಿಸಿದರು.