ಕಾಸರಗೋಡು: ಕುಂಬಳೆ–ಮುಳ್ಳೇರಿಯಾ ಕೆಎಸ್‌ಟಿಪಿ ರಸ್ತೆಯಲ್ಲಿ ಕಾರು ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಬಸ್ ಪ್ರಯಾಣಿಕರಲ್ಲೂ ಹಲವರಿಗೆ ಗಾಯಗಳಾಗಿವೆ.
ಇಂದು ಬೆಳಗ್ಗೆ ಸುಮಾರು 8.30 ಗಂಟೆ ವೇಳೆಗೆ ಶಾಂತಿಪಳ್ಳದ ಎಕ್ಸೈಸ್ ಕಚೇರಿ ಸಮೀಪ ಈ ಅಪಘಾತ ಸಂಭವಿಸಿದೆ. ಬದಿಯಡ್ಕ ಕಡೆಗೆ ತೆರಳುತ್ತಿದ್ದ ಕಾರು ಮತ್ತು ಕುಂಬಳೆಯ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ.
ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನಾಶಗೊಂಡಿದ್ದು, ಕಾರಿನೊಳಗಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಲಕನ ಆಸನದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಕಾರನ್ನು ಕತ್ತರಿಸಿ ಹೊರತೆಗೆದ ಬಳಿಕ ರಕ್ಷಿಸಲಾಯಿತು. ಗಾಯಾಳುಗಳನ್ನು ಚೆಂಗಳ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಕುರಿತು ಹೆಚ್ಚಿನ ವಿವರಗಳು ಇನ್ನೂ ಲಭ್ಯವಾಗಿಲ್ಲ.
ಇದೇ ವೇಳೆ ಬಸ್ ಪ್ರಯಾಣಿಕರಲ್ಲೂ ಹಲವರಿಗೆ ಗಾಯಗಳಾಗಿದ್ದು, ಕನ್ಯಪ್ಪಾಡಿಯ ಮುಷ್ಕಾನ್ (23), ನೀರ್ಚಾಲಿನ ದೀಪಿಕಾ (22) ಮತ್ತು ಭಾಸ್ಕರ್ ನಗರಿನ ಸುಜಾತ (40) ಅವರನ್ನು ಕುಂಬಳೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕೆಲ ಗಾಯಾಳುಗಳನ್ನು ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.
ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.