ಕಾಸರಗೋಡು: ಕೆ. ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯದ ರಜತ ಮಹೋತ್ಸವ ಅಂಗವಾಗಿ ಸಾಹಿತ್ಯೋತ್ಸವ

ಕಾಸರಗೋಡು: ಕಾಸರಗೋಡು ಕನ್ನಡ ಗ್ರಾಮದಲ್ಲಿರುವ ಕೆ. ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯದ ರಜತ ಮಹೋತ್ಸವ ವರ್ಷ (2000–2026) ಅಂಗವಾಗಿ “25 ಸರಣಿ ದತ್ತಿ ಉಪನ್ಯಾಸ ಮಾಲಿಕೆ” ಹಾಗೂ “ಕಾಸರಗೋಡು ಸಾಹಿತ್ಯೋತ್ಸವ – ಕನ್ನಡೋತ್ಸವ” ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ ಖಾಸಗಿ ನೆಲೆಯಲ್ಲಿ ಬೃಹತ್ ಕನ್ನಡ ಪುಸ್ತಕಗಳ ಸಂಗ್ರಹವನ್ನು ಹೊಂದಿರುವ ಈ ಗ್ರಂಥಾಲಯವು ಲೇಖಕರು, ಸಾಹಿತಿಗಳು, ಕವಿಗಳು, ಮಾಧ್ಯಮದವರು, ಶಿಕ್ಷಣ ತಜ್ಞರು, ಸಂಶೋಧಕರು ಮತ್ತು ಕಲಾವಿದರಿಗೆ ಅಧ್ಯಯನಕ್ಕೆ ಅಗತ್ಯವಾದ ವಿವಿಧ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಇತಿಹಾಸಕ್ಕೆ ಸಂಬಂಧಿಸಿದ ಅನೇಕ ಕೃತಿಗಳನ್ನು ಸಂಗ್ರಹಿಸಿಕೊಂಡಿದೆ.

2000ರಲ್ಲಿ ಸ್ಥಾಪಿತವಾದ ಈ ಗ್ರಂಥಾಲಯವು ಗ್ರಾಮೀಣ ವಾತಾವರಣದಲ್ಲಿದ್ದು, ಅಂತರರಾಜ್ಯ ಹಾಗೂ ವಿದೇಶಗಳಿಂದ ಆಗಮಿಸುವ ಕನ್ನಡ ಸಾಂಸ್ಕೃತಿಕ ರಾಯಬಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಲೇಖಕರು, ಕವಿಗಳು ಮತ್ತು ಸಂಶೋಧಕರಿಗೆ ಭೇಟಿ ನೀಡಲು ಹಾಗೂ ಅಧ್ಯಯನ ಮಾಡಲು ಅವಕಾಶ ಒದಗಿಸುತ್ತದೆ. ಅಲ್ಲದೆ ಅವರು ಕಾಸರಗೋಡು ಜಿಲ್ಲೆಯ ಐತಿಹಾಸಿಕ ಹಾಗೂ ಪ್ರವಾಸಿ ಸ್ಥಳಗಳನ್ನು ಸಂದರ್ಶಿಸಲು ಸಹ ವ್ಯವಸ್ಥೆ ಕಲ್ಪಿಸಲಾಗಿದೆ.

ಗ್ರಂಥಾಲಯದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಇತಿಹಾಸದ ಕುರಿತಾಗಿ ವಿಚಾರಗೋಷ್ಠಿ, ಸಂಕಿರಣ, ಚರ್ಚಾಗೋಷ್ಠಿ, ಕಮ್ಮಟ, ತರಬೇತಿ ಶಿಬಿರಗಳು, ವಿಶೇಷ ಉಪನ್ಯಾಸಗಳು ಮತ್ತು ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲು ವಿವಿಧ ಅಕಾಡೆಮಿಗಳು, ಪ್ರಾಧಿಕಾರಗಳು, ವಿಶ್ವವಿದ್ಯಾನಿಲಯಗಳು ಹಾಗೂ ಸಂಘ-ಸಂಸ್ಥೆಗಳಿಗೆ ಉಚಿತವಾಗಿ ಸ್ಥಳಾವಕಾಶ ನೀಡಲಾಗಿದೆ. ಈ ಕಾರ್ಯಕ್ರಮಗಳನ್ನು ಪ್ರತಿ ತಿಂಗಳ ನಾಲ್ಕನೇ ಶನಿವಾರ ಸಂಜೆ 3.30 ರಿಂದ 6 ಗಂಟೆಯವರೆಗೆ ನಡೆಸಲಾಗುತ್ತದೆ.

ಗ್ರಂಥಾಲಯಕ್ಕೆ ಕಂಪ್ಯೂಟರ್, ಪೀಠೋಪಕರಣಗಳು, ಪುಸ್ತಕ ಕಪಾಟುಗಳು ಮತ್ತು ಪುಸ್ತಕಗಳನ್ನು ದಾನವಾಗಿ ನೀಡುವಂತೆ ದಾನಿಗಳು, ಸಂಘ-ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳಿಗೂ ಮನವಿ ಮಾಡಲಾಗಿದೆ. ಗ್ರಂಥಾಲಯದ ನಿರ್ವಹಣೆಗೆ ಆರ್ಥಿಕ ಸಹಾಯ ನೀಡುವಂತೆ ಸಹ ವಿನಂತಿಸಲಾಗಿದೆ.

ಇದಲ್ಲದೆ ವಿವಿಧ ಸಂಘ-ಸಂಸ್ಥೆಗಳು, ದೇವಸ್ಥಾನಗಳು, ಮಠಗಳು ಹಾಗೂ ದೇಶ-ವಿದೇಶಗಳ ಕನ್ನಡಿಗರು ನೀಡಿರುವ ಸಾಹಿತ್ಯ ಕೃತಿಗಳ ಪ್ರದರ್ಶನವನ್ನು ಕೂಡ ಏರ್ಪಡಿಸಲಾಗುತ್ತದೆ. ಗಲ್ಫ್ ರಾಷ್ಟ್ರಗಳು ಹಾಗೂ ವಿದೇಶಗಳಲ್ಲಿ ಇರುವ ಅನಿವಾಸಿ ಭಾರತೀಯ ಕನ್ನಡಿಗರು ಪ್ರಕಟಿಸಿರುವ ಸಾಹಿತ್ಯ ಕೃತಿಗಳನ್ನು ಸಂಗ್ರಹಿಸಿ ಪ್ರದರ್ಶನ ಮಾಡಲು ಯೋಜಿಸಲಾಗಿದೆ.

ಸಾಹಿತ್ಯಾಸಕ್ತರು, ಲೇಖಕರು, ಪ್ರಕಾಶಕರು ತಮ್ಮ ಪ್ರಕಟಿತ ಕೃತಿಗಳನ್ನು ಗ್ರಂಥಾಲಯಕ್ಕೆ ದೇಣಿಗೆಯಾಗಿ ನೀಡುವಂತೆ ಕೋರಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆ. ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರನ್ನು ಮೊಬೈಲ್ ಸಂಖ್ಯೆ 9448572016 ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!