ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಜನ್ಮ ಶತಮಾನೋತ್ಸವ – ಬಾಯಾರಿನಲ್ಲಿ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಕ್ಕೆ ಅದ್ಧೂರಿ ಸ್ವಾಗತ

ಬಾಯಾರು : ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮಶತಮಾನೋತ್ಸವ ಆಚರಣೆಯ ಪ್ರಯುಕ್ತ ಆಂಧ್ರ ಪ್ರದೇಶದ ಪುಟ್ಟಪರ್ತಿ ಪ್ರಶಾಂತಿ ನಿಲಯಂ ಶ್ರೀ ಸತ್ಯಸಾಯಿ ಆಶ್ರಮದಿಂದ ಹೊರಟು ದೇಶವ್ಯಾಪಿ ಸಂಚರಿಸುವ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥವು ಮಾರ್ಚ್ 10ರಿಂದ 12ರ ವರೆಗೆ ಕಾಸರಗೋಡು ಜಿಲ್ಲೆಯ ವಿವಿಧ ಶ್ರದ್ಧಾಕೇಂದ್ರಗಳಿಗೆ ಹಾಗೂ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರಗಳಿಗೆ ಭೇಟಿನೀಡಿತು. ಬುಧವಾರ ಸಂಜೆ ಬಾಯಾರು ಪರಿಸರಕ್ಕೆ ತಲುಪಿದ ರಥವನ್ನು ಆಟಿಕುಕ್ಕೆ ಪೆಟ್ರೋಲ್ ಪಂಪ್ ಬಳಿಯಿಂದ ಬಾಯಾರು ಪೇಟೆಯ ಮೂಲಕ ಆಕರ್ಷಕ ಮೆರವಣಿಗೆಯಲ್ಲಿ ಪ್ರಶಾಂತಿ ವಿದ್ಯಾಕೇಂದ್ರಕ್ಕೆ ಸ್ವಾಗತಿಸಲಾಯಿತು.

ಪೂರ್ಣಕುಂಭ ಸ್ವಾಗತದಲ್ಲಿ ಮಕ್ಕಳ ವೇದ ಪಠಣ, ಕುಣಿತಭಜನೆ, ಸಾಯಿ ಸಂದೇಶ ಫಲಕಗಳು, ಸಿಂಗಾರಿಮೇಳ ತಂಡಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ಶ್ರೀ ಸತ್ಯಸಾಯಿ ಪಾದುಕಾ ಪೂಜೆಯ ಬಳಿಕ ಭಕ್ತರಿಗೆ ಪಾದುಕಾ ದರ್ಶನಕ್ಕೆ ಅವಕಾಶವನ್ನು ಒದಗಿಸಲಾಗಿತ್ತು. ಬಳಿಕ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕರ್ನಾಟಕ ಇದರ ಶೈಕ್ಷಣಿಕ ಸಂಯೋಜಕರಾದ ಜಗನ್ನಾಥ ನಾಡಿಗೇರ್, ದಾವಣಗೆರೆ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಸತ್ಸಂಗವನ್ನು ನೆರವೇರಿಸಿದರು. ಶ್ರೀ ಸತ್ಯ ಸಾಯಿ ಲೋಕಸೇವಾ ಟ್ರಸ್ಟ್ ಅಳಿಕೆ ಇದರ ಕಾರ್ಯದರ್ಶಿಗಳಾದ ಚಂದ್ರಶೇಖರ ಭಟ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕರ್ನಾಟಕ ಐಟಿ ಕಾರ್ಡಿನೇಟರ್ ಸಂಜಯ್ ಪಾಟೇಕರ್, ಪೈವಳಿಕೆ ಪಂಚಾಯತ್ ಉಪಾಧ್ಯಕ್ಷರಾದ ರಾಘವೇಂದ್ರ ಟಿ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕಾಸರಗೋಡು ಜಿಲ್ಲಾಧ್ಯಕ್ಷರಾದ ಹಿರಣ್ಯ ಮಹಾಲಿಂಗ ಭಟ್, ಪ್ರಶಾಂತಿ ಸೇವಾ ಟ್ರಸ್ಟ್ ಉಪಾಧ್ಯಕ್ಷರಾದ ಪೆಲತಡ್ಕ ರಾಮಕೃಷ್ಣ ಭಟ್, ಕೋಶಾಧಿಕಾರಿಗಳಾದ ಮಾಣಿಪ್ಪಾಡಿ ನಾರಾಯಣ ಭಟ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಬಾಯಾರು ಸತ್ಯ ಸಾಯಿ ಸೇವಾ ಸಮಿತಿಯ ಸಂಚಾಲಕರಾದ ಕಟ್ಟದಮನೆ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಪ್ರಶಾಂತಿ ವಿದ್ಯಾಕೇಂದ್ರದ ಪ್ರಾಂಶುಪಾಲರಾದ ವಾಮನನ್ ಎ ವಂದಿಸಿದರು. ಶಿಕ್ಷಕರಾದ ನಿತ್ಯಾನಂದ ಕೆ ಆರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸ್ಥಳೀಯ ಬಾಲಗೋಕುಲದ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!