ಉಪ್ಪಳ : ಮಂಗಲ್ಪಾಡಿ ಗ್ರಾಮ ಪಂಚಾಯತಿನ ಎಂಟನೇ ವಾರ್ಡಿನಲ್ಲಿರುವ ಬೇಕೂರು ರುದ್ರಭೂಮಿ ಅವ್ಯವಸ್ಥೆಯ ಆಗರವಾಗಿದ್ದು ,ತೀರಾ ಶೋಚನೀಯವಾದ ಸ್ಥಿತಿಯಲ್ಲಿದೆ.ಪರಿಶಿಷ್ಟ ಜಾತಿಯ ವಿಭಾಗಕ್ಕೆ ಮೀಸಲಾದ ಈ ಸ್ಮಶಾನ ಇದೀಗ ಸಂಪೂರ್ಣ ಕಾಡು, ಪೊದೆಗಳಿಂದ ಆವೃತವಾಗಿದೆ.
ಪರಿಣಾಮ ಶವದ ಅಂತ್ಯ ಸಂಸ್ಕಾರ ಮಾಡಲು ಹರ ಸಾಹಸ ಪಡಬೇಕಾಗುತ್ತದೆ.ಸಂಸ್ಕಾರ ಮಾಡುವ ಶೆಡ್ ತೀವ್ರ ರೂಪದಲ್ಲಿ ಬಿರುಕು ಬಿಟ್ಟಿದ್ದು ಮಳೆಗಾಲದಲ್ಲಿ ಇಲ್ಲಿ ಶವ ಸಂಸ್ಕಾರ ಮಾಡಲು ಬಹಳ ಕಷ್ಟವಾಗುತ್ತದೆ ಎಂಬುವುದು ಸಾರ್ವಜನಿಕರ ಅಭಿಪ್ರಾಯ . 2008 ರಲ್ಲಿ ಅಲ್ಪ ಮೊತ್ತದ ಅನುದಾನದಲ್ಲಿ ಇಲ್ಲಿ ಒಂದಿಷ್ಟು ನವೀಕರಣ ನಡೆದರೂ ಮತ್ತೆ ಗ್ರಾಮ ಪಂಚಾಯತ್ ಅಧಿಕೃತರಾಗಲಿ ,ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯಾಗಲಿ ಈ ಕಡೆ ಮುಖ ಮಾಡಿಲ್ಲ .
ಇಲ್ಲಿನ ಆವರಣ ಗೋಡೆಯು ಸಂಪೂರ್ಣ ನಾಶ ಗೊಂಡಿದ್ದು ,ಪರಿಣಾಮ ಸ್ಮಶಾನದ ಒಳಗಡೆ ತ್ಯಾಜ್ಯ ಸಹಿತ ಮಲೀನ ವಸ್ತುಗಳನ್ನು ಸಾರ್ವಜನಿಕರು ಎಸೆಯುತ್ತಿದ್ದಾರೆ.ಪರಿಣಾಮವಾಗಿ ಈ ಸ್ಮಶಾನವು ದುರ್ಗಂಧ ಬೀರುತ್ತಿದ್ದು ಶವಸಂಸ್ಕಾರಕ್ಕೆ ಬಂದವರಿಗೆ ಉಸಿರುಕಟ್ಟುವ ವಾತಾವರಣವಿದೆ.
ಈ ಅವ್ಯವಸ್ಥೆಗೆ ಗ್ರಾಮ ಪಂಚಾಯತ್ ಅಧಿಕೃತರು , ಸ್ಥಳೀಯ ಪಂಚಾಯತ್ ಸದಸ್ಯರು ಶೀಘ್ರವಾಗಿ ಶಾಶ್ವತ ಪರಿಹಾರ ಒದಗಿಸಬೇಕಾಗಿದೆ.