ಮಂಜೇಶ್ವರದ ಹಲವೆಡೆ ಬೀದಿ ನಾಯಿಗಳ ಹಾವಳಿ-ಸಾರ್ವಜನಿಕರಲ್ಲಿ ಆತಂಕ

ಮಂಜೇಶ್ವರ : ಮಂಜೇಶ್ವರದ ಹಲವೆಡೆ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜಕರಲ್ಲಿ ವಿಶೇಷವಾಗಿ ಪೋಷಕರಲ್ಲಿ ಭಾರೀ ಆತಂಕ ಹುಟ್ಟಿಸಿದೆ. ಮನೆಯಿಂದ ಮಕ್ಕಳನ್ನು ಶಾಲೆಗೆ ಅದೇ ರೀತಿ ಮದ್ರಸ ಅದೇ ರೀತಿ ಇನ್ನಿತರ ಅವಶ್ಯಕತೆಗೆ ಹೊರಗೆ ಕಳಿಸಲು ಭಯಪಡುವ ಪರಿಸ್ಥಿತಿ ಎದುರಾಗಿದೆ.


ಇತ್ತೀಚಿನ ಕೆಲವು ದಿನಗಳಲ್ಲಿ ಶಾಲೆಗೆ ಹೋಗುವ ವೇಳೆ ಅಥವಾ ಆಟವಾಡಲು ಹೊರ ಹೋಗುವ ವೇಳೆ, ಶಾಲಾ ಮದ್ರಸಗಳಿಗೆ ತೆರಳುತ್ತಿರುವಾಗ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡುವುದು ನಿತ್ಯ ದರ್ಶನವಾಗಿದೆ.

ಬಾನುವಾರದಂದು ಮಂಜೇಶ್ವರದಲ್ಲಿ ಎರಡು ಮಂದಿಗೆ ಬೀದಿನಾಯಿ ಕಡಿದು ಗಾಯಗೊಳಿಸಿದೆ. ಮಂಜೇಶ್ವರ ಮಚ್ಚಂಪ್ಪಾಡಿ ಕೋಡಿ ನಿವಾಸಿ ಮಹಮೂದ್ ಎಂಬವರ 8 ವರ್ಷದ ಬಾಲಕ ಮಹಮ್ಮದ್ ಆಯಿಲ್ ಮನೆ ಅಂಗಳಕ್ಕೆ ಬಂದಾಗ ಬೆನ್ನಟ್ಟಿಕೊಂಡು ಬಂದ ಬೀದಿ ನಾಯಿಯೊಂದು ಕಚ್ಚಿ ಗಾಯಗೊಳಿಸಿದೆ. ಬಳಿಕ ಬಾಲಕನನ್ನು ಕಾಸರಗೋಡಿನ ಆಸ್ಪತ್ರೆಗೆ ಕೊಂಡು ಹೋಗಿ ಚುಚ್ಚು ಮದ್ದು ಕೊಡಿಸಲಾಗಿದೆ. ಈ ದೃಶ್ಯ ಮನೆಯ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅದೇ ರೀತಿ ಬಾನುವಾರ ಸಂಜೆ ಮಂಜೇಶ್ವರ ಬಡಾಜೆ ಚೌಕಿ ನಿವಾಸಿ ಮುಸ್ತಫ ಎಂಬವರನ್ನು ಬೆನ್ನಟ್ಟಿಕೊಂಡು ಬಂದ ಬೀದಿ ನಾಯಿಯೊಂದು ಕೈಯ ಭಾಗಕ್ಕೆ ಕಚ್ಚಿ ಗಂಭೀರ ಗಾಯಗೊಳಿಸಿದೆ. ಬಳಿಕ ಇವರ ಬೊಬ್ಬೆ ಕೇಳಿ ಜನ ಸೇರುವಾಗ ನಾಯಿ ಓಡಿದೆ. ಬಳಿಕ ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ದು ಚುಚ್ಚು ಮದ್ದು ನೀಡಲಾಗಿದೆ.


ಊರಿನಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಯಾವ ಕ್ರಮವನ್ನೂ ಸ್ಥಳೀಯಾಡಳಿತ ಕೈಗೊಳ್ಳದೇ ಇರುವುದು ಖೇದಕರ. ಮಕ್ಕಳು ಆಟವಾಡಲು ಹೋದಾಗ ನಾಯಿಗಳು ಬೆನ್ನತ್ತಿ ಓಡಿಸುತ್ತವೆ. ಕೆಲವೊಮ್ಮೆ ಕಚ್ಚಲು ಯತ್ನಿಸುತ್ತವೆ. ಈ ಹಿನ್ನೆಲೆಯಲ್ಲಿ ಹೆದರಿಕೊಂಡು ಮಕ್ಕಳನ್ನು ಮನೆಯಲ್ಲಿಯೇ ಇರಿಸುತ್ತಿರುವುದಾಗಿ ಸ್ಥಳೀಯರು ಹೇಳುತಿದ್ದಾರೆ.ಪಾಲಕರ ಆತಂಕ ಸಮಂಜಸವಾಗಿದೆ. ಬೀದಿ ನಾಯಿಗಳ ಸಮಸ್ಯೆ ಮಂಜೇಶ್ವರದ ಹಲವೆಡೆ ಸಾಮಾನ್ಯವಾಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಭದ್ರತೆಯ ಭರವಸೆ ನೀಡುವುದು ಅಗತ್ಯವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!