ಮಂಜೇಶ್ವರ : ಕುತ್ತಿಕೋಲ್ ನಿಂದ ಮಂಜೇಶ್ವರಕ್ಕೆ ಪ್ರಾಣಿಗಳ ಬೇಟೆಗಾಗಿ ಬಂದಿಳಿದ ಯುವಕರನ್ನು ಬೆದರಿಸಿ ಅವರಿಂದ ರೈಫಲ್, ಸ್ಕೂಟರ್ ಹಾಗೂ ಮೊಬೈಲ್ ಫೋನ್ ದೋಚಿದ ಪ್ರಕರಣದಲ್ಲಿ, ಕಾಪಾ ಪ್ರಕರಣದ ಆರೋಪಿ ಸೇರಿದಂತೆ ನಾಲ್ಕು ಮಂದಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ರಾಶಿಕ್ ಎಂಬಾತ ಪರಾರಿಯಾಗಿದ್ದಾನೆ.
ಹೊಸಂಗಡಿ ಅಂಗಡಿಪದವಿನ ಸೈಫುದ್ದೀನ್ ಆಲಿಯಾಸ್ ಪೂಚ ಸೈಫು (30), ಹಿದಾಯತ್ ನಗರ ಮುಟ್ಟತೋಡಿಯ ಮೊಯಿದಿನ್ ಆಲಿಯಾಸ್ ಚರಮುರು ಮೊಯ್ದು (29), ನ್ಯಾಷನಲ್ ನಗರ ಉಳಿಯತ್ತಡ್ಕದ ಮೊಹಮ್ಮದ್ ಸುಹೈಲ್ (27), ಬಿಲಾಲ್ ನಗರದ ಅಮೀರ್ (28) ಬಂಧಿತ ಆರೋಪಿಗಳು. ಪುರುಷರಂಗೋಡಿ ನಿವಾಸಿ ರಾಸಿಕ್ ಪರಾರಿಯಾಗಿದ್ದಾನೆ.
ಶುಕ್ರವಾರ ರಾತ್ರಿ 11.30ರ ಸುಮಾರಿಗೆ. ಕುತ್ತಿಕೋಳಿನಿಂದ ಮೃಗಗಳನ್ನು ಬೇಟೆಯಾಡಲು ಬಂದ ನಿತಿನ್ ರಾಜ್, ರತೀಶ್ ಹಾಗೂ ಪ್ರವೀಣ್ ಎಂಬವರು ಸ್ಕೂಟರ್‌ನಲ್ಲಿ ವರ್ಕಾಡಿ ಮಜಿರ್ಪಳ್ಳ ಎಂಬ ಕಡೆಗೆ ಹೋಗುತ್ತಿರುವ ದಾರಿ ಮಧ್ಯೆ ರಾಶಿಕ್ ಎಂಬಾತ ಅವರನ್ನು ತಡೆದು ಅವರು ಬೇಟೆಗೆ ಬಂದಿದ್ದಾಗಿ ತಿಳಿಸಿದ ಮೇಲೆ, ರಾಶಿಕ್ ತನ್ನ ಸಹಚರರನ್ನು ಕರೆದು, ಒಟ್ಟಾಗಿ ಐದು ಮಂದಿ ಬಂದು ಬೇಟೆಗಾಗಿ ಬಂದ ತಂಡದಿಂದ ಬ್ಯಾಗ್ ಕಸಿದು ನೋಡಿದಾಗ ರೈಫಲ್ ಪತ್ತೆಯಾಗುತ್ತದೆ.
ಬಳಿಕ ಸೈಫುದ್ದೀನ್ ನೇತೃತ್ವದ ತಂಡ ನಿತಿನ್ ಮತ್ತು ಇತರರನ್ನು ಕಾರಿನಲ್ಲಿ ಹತ್ತಿಸಿ, ಮಜಿರ್ಪಳ್ಳದಲ್ಲಿರುವ ನಿರ್ಮಾಣ ಹಂತದಲ್ಲಿರುವ ಮನೆಗೆ ಕರೆದೊಯ್ದು, ಪೊಲೀಸರಿಗೆ ರೈಫಲ್ ನ್ನು ಒಪ್ಪಿಸುತ್ತವೆಂದು ಬೆದರಿಸಿ ಮೂರು ಲಕ್ಷ ರೂಪಾಯಿ ಬೇಡಿಕೆ ಇಡುತ್ತಾರೆ. ಇದನ್ನು ನಿರಾಕರಿಸಿದಾಗ ತಂಡ ಬೇಡೆಯಾಡಲು ಬಂದವರನ್ನು ಹಿಗ್ಗಾಮುಗ್ಗಾ ಥಳಿಸುತ್ತಾರೆ. ಬೇಟೆಯಾಡಲು ಬಂದ ತಂಡದ ಬೊಬ್ಬೆಯಿಂದ ತಂಡ ಅಲ್ಲಿಂದ ಮಧ್ಯ ರಾತ್ರಿ ಹೊಸಂಗಡಿಯ ನಿರ್ಜನ ಮೈದಾನಕ್ಕೆ ಕೊಂಡೊಯ್ದು ಹಲ್ಲೆಗೈದು ತಂಡ ಪರಾರಿಯಾಗುತ್ತದೆ
ಬಳಿಕ ಮಾಹಿತಿ ಅರಿತ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಆದರೆ ಈ ಪೈಕಿ ರಾಸಿಕ್ ಎಂಬಾತ ಸ್ಥಳದಿಂದ ಓಡಿ ತಪ್ಪಿಸಿಕೊಂಡಿದ್ದಾನೆ.
ಸೈಫುದ್ದೀನ್ ವಿರುದ್ಧ ಈಗಾಗಲೇ ಹಲವು ಪ್ರಕರಣಗಳಿದ್ದು, ಕಾಪ ಪ್ರಕರಣದ ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ ಸ್ಕೂಟರ್, ಮೊಬೈಲ್ ಫೋನ್ ಹಾಗೂ ಆರೋಪಿಗಳು ಬಳಸಿದ ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.