ವ್ಯಾಪಕಗೊಂಡ ಅನಧಿಕೃತ ಮರಳು ಸಾಗಾಟ : ಇತಿಹಾಸದಲ್ಲೇ ಮೊಟ್ಟ ಮೊದಲಾಗಿ ಇಬ್ಬರನ್ನು ಜಾಮೀನು ರಹಿತ ಕೇಸು ದಾಖಲಿಸಿ ಜೈಲಿಗಟ್ಟಿದ ಕುಂಬಳೆ ಪೊಲೀಸರು

ಮಂಜೇಶ್ವರ : ಮಂಜೇಶ್ವರ ಹಾಗೂ ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತ ಮರಳು ಸಾಗಾಟ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಮೊತ್ತ ಮೊದಲಾಗಿ ಕುಂಬಳೆ ಪೊಲೀಸರು ಮರಳು ಸಾಗಾಟ ಮಾಡುವವರ ವಿರುದ್ಧ ಜಾಮೀನು ರಹಿತ ಕೇಸು ದಾಖಲಿಸಿದ್ದಾರೆ. ಮರಳು ಸಾಗಾಟ ಮಾಡಲು ಉಪಯೋಗಿಸಿದ ಓಮ್ನಿ ವ್ಯಾನ್ ವಶಕ್ಕೆ ತೆಗೆಯಲಾಗಿದೆ.

ಅರಿಕ್ಕಾಡಿ ನಿವಾಸಿ ಮನ್ಸೂರ್ ಅಲಿ (31) ಹಾಗೂ ಕುಂಬಳೆ ಪೆರ್ವಾಡ್ ನಿವಾಸಿ ಜುಸೈರ್ (33) ಬಂಧಿತ ಆರೋಪಿಗಳು.

ಆರಿಕ್ಕಾಡಿಯಲ್ಲಿ ಅನಧಿಕೃತ ಕಡವಿನಿಂದ ಓಮ್ನಿ ವ್ಯಾನ್ ನಲ್ಲಿ 25 ಗೋಣಿ ಮರಳು ಸಾಗಾಟ ಮಾಡುತ್ತಿರುವ ಮಧ್ಯೆ ಇವರನ್ನು ಸೆರೆ ಹಿಡಿಯಲಾಗಿದೆ.
ಸರಕಾರದ ಸ್ಥಳದಿಂದ ಸಾರ್ವಜನಿಕ ಸೊತ್ತನ್ನು ಕಳವುಗೈಯಲು ಯತ್ನಿಸಿದ 305 ಇ ಸೆಕ್ಷನ್ ಪ್ರಕಾರ ಇವರ ವಿರುದ್ದ ಕೇಸು ದಾಖಲಿಸಲಾಗಿದೆ. ಇವರನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮರಳು ಮಾಫಿಯಾಗಳ ವಿರುದ್ಧ ಜಾಮೀನು ರಹಿತ ಕೇಸು ದಾಖಲಾಗುವುದು ಇತಿಹಾಸದಲ್ಲೇ ಮೊಟ್ಟಮೊದಲಾಗಿದೆ. ಮೊದಲು ಇವರಿಗೆ ಠಾಣೆಯಲ್ಲೇ ಜಾಮೀನು ಲಭಿಸುತಿತ್ತು. ಮರಳು ಮಾಫಿಯಾಗಳಿಗೆ ಪೊಲೀಸರ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿರುವ ಆರೋಪದಲ್ಲಿ ಒಂದು ತಿಂಗಳಿಗೆ ಮುಂಚೆ ಕುಂಬಳೆ ಠಾಣೆಯಿಂದ ಐದು ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು. ಇದಾದ ಬಳಿಕ ಕುಂಬಳೆ ಠಾಣೆಯಲ್ಲಿ ಮರಳು ಮಾಫಿಯಾಗಳ ವಿರುದ್ಧ ಪೊಲೀಸರು ಕಾರ್ಯಾಚರಣೆಯನ್ನು ತೀರ್ವಗೊಳಿಸಿದ್ದಾರೆ.


ಇದೀಗ ಮಂಜೇಶ್ವರ ಠಾಣಾ ವ್ಯಾಪ್ತಿಯ ಕುಂಡು ಕೊಳಕೆ ಬೀಚ್ ನಿಂದ ಮರಳು ಸಾಗಾಟ ವ್ಯಾಪಕವಾಗಿದ್ದು ಸ್ಥಳೀಯರು ಸಂಬಂಧಪಟ್ಟವರಿಗೆ ಹಲವು ಸಲ ದೂರುಗಳನ್ನು ನೀಡಿದರೂ ಯಾವುದೇ ಪ್ರತಿಕ್ರಿಯೆ ಇಲ್ಲವೆನ್ನಲಾಗಿದೆ.

ಇದೇ ರೀತಿ ಕುಂಜತ್ತೂರು ಸಮೀಪದ ಕಣ್ವತೀರ್ಥ ಬೀಚ್ ನಲ್ಲಿ ನೇರ ಸಮುದ್ರಕ್ಕೆ ಟಿಪ್ಪರ್ ಹೋಗುವ ವ್ಯವಸ್ಥೆ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಹಾಕಲಾಗಿದ್ದ ಹೈ-ಮಾಸ್ಟ್ ಲೈಟಿಂಗ್ ಆಫ್ ಮಾಡಿ ಕತ್ತಲೆಯಲ್ಲಿ ಇಲ್ಲಿಂದ ಮರಳು ಸಾಗಾಟ ಮಾಡಲಾಗುತಿತ್ತು. ಇದರ ವಿರುದ್ಧ ಸ್ಥಳೀಯರು ರಹಸ್ಯವಾಗಿ ಒಗ್ಗೂಡಿ ರಾತ್ರಿ ಸಮಯಗಳಲ್ಲಿ ಟಿಪ್ಪರ್ ಲಾರಿಗಳಲ್ಲಿ ಮರಳು ಸಾಗಾಟಕ್ಕಾಗಿ ಲೈಟ್ ಆಫ್ ಮಾಡುವುದನ್ನು ಸಿ ಸಿ ಕ್ಯಾಮಾರದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಲು ಬಿಟ್ಟಾಗ ಕಣ್ವತೀರ್ಥದಿಂದ ಪಲಾಯಣಗೈದ ಮರಳು ಮಾಫಿಯಾಗಳು ಈಗ ಕುಂಡು ಕೊಳಕೆಯಲ್ಲಿ ತಲೆ ಎತ್ತಿರುವುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ.

ಸಂಬಂಧಪಟ್ಟವರು ಕೂಡಲೇ ಇದಕ್ಕೊಂದು ಕಡಿವಾಣ ಹಾಕದಿದ್ದರೆ ಇಲ್ಲಿಯ ನಾಗರಿಕರು ಠಾಣೆಯ ಮುಂಬಾಗದಲ್ಲಿ ಪ್ರತಿಭಟನೆಗೆ ತಯಾರಿ ನಡೆಸುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!