ಮಂಜೇಶ್ವರ: ಸಂಬಂಧಿಕರ ಮನೆಗೆ ಆಗಮಿಸಿದ್ದ ಅನ್ಯ ರಾಜ್ಯದ ಇಬ್ಬರು ಬಾಲಕಿಯರಲ್ಲಿ ಜ್ವರದ ತೀವ್ರ ತೊಂದರೆ ಕಾಣಿಸಿಕೊಂಡ ಪರಿಣಾಮ ಒಬ್ಬಳು ಸಾವನ್ನಪ್ಪಿ, ಮತ್ತೊಬ್ಬಳನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಿರುವ ದುರ್ಘಟನೆ ಕೇರಳ–ಕರ್ನಾಟಕ ಗಡಿ ಪ್ರದೇಶವಾದ ತೂಮಿನಾಡಿನಲ್ಲಿ ನಡೆದಿದೆ.
ಹರ್ಯಾನಾ ಮೂಲದ 9 ವರ್ಷದ ಮಾಹಿ ಎಂಬ ಬಾಲಕಿ ಸಾವನ್ನಪ್ಪಿದರೆ,
ಅವಳ ಜೊತೆಯಲ್ಲಿದ್ದ 13 ವರ್ಷದ **ಕಾಣಿಕಾ ಎಂಬ ಬಾಲಕಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಂಬಂಧಿಕರ ಮನೆಗೆ ಬಂದಿದ್ದ ಈ ಇಬ್ಬರು ಬಾಲಕಿಯರು ಅಸ್ವಸ್ಥಗೊಂಡ ಸಂದರ್ಭ ಸ್ಥಳೀಯರಲ್ಲಿ ಯಾರೂ ಇಲ್ಲದ ವೇಳೆ ಸಮಾಜ ಸೇವಕ ಇಲ್ಯಾಸ್ ತೂಮಿನಾಡಿನ ಹಾಗೂ ಅವರ ತಂಡದ ಸದಸ್ಯರು ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿ ಬಾಲಕಿಯರನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ. ಅವರು ಹರ್ಯಾನಾದಲ್ಲಿರುವ ಕುಟುಂಬದವರೊಂದಿಗೆ ಸಂಪರ್ಕಿಸಿ ಅವರಿಗೆ ಧೈರ್ಯ ನೀಡಿ ಮಾನವೀಯತೆ ಮೆರೆದಿದ್ದಾರೆ.ಮಾಹಿಯ ಪೋಷಕರು ದೂರದಲ್ಲಿರುವ ಕಾರಣ ತೂಮಿನಾಡಿನ ಸಮಾಜ ಸೇವಕರ ತಂಡವೇ ಅಂತ್ಯಕ್ರಿಯೆಯ ಎಲ್ಲಾ ವ್ಯವಸ್ಥೆಗಳನ್ನು ನಿರ್ವಹಿಸಿ, ಉದ್ಯಾವರ ಶ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು.
ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಣಿಕಾಳ ಚಿಕಿತ್ಸಾ ಖರ್ಚುಗಳನ್ನು ಸಂಪೂರ್ಣವಾಗಿ ಸಮಾಜ ಸೇವಕರೇ ಹೊರುವ ನಿರ್ಧಾರ ಕೈಗೊಂಡಿದ್ದಾರೆ.ಅಬ್ದುಲ್ ಲತೀಫ್ ಬಾಬಾ, ಆಶಿಕ್, ರಫೀಕ್, ಅನ್ವರ್, ಇಬ್ಬು, ಹಾರಿಶ್, ಶನ್ನು, ಕಲೀಲ್ ಮೊದಲಾದವರು ಈ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದರು.
ಈ ಘಟನೆ ಸ್ಥಳೀಯರಲ್ಲಿ ಆಳವಾದ ದುಃಖ ಮೂಡಿಸಿದರೂ, ಮಾನವೀಯತೆ ಹಾಗೂ ಸಹಾಯ ಹಸ್ತ ಚಾಚಿದ ತೂಮಿನಾಡಿನ ಸಮಾಜ ಸೇವಕರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆಗಳು ಹರಿದು ಬರುತ್ತಿವೆ.