ಕಾಸರಗೋಡು : ನಮ್ಮ ಹಕ್ಕುಗಳು ಮತ್ತು ಸಂವಿಧಾನಾತ್ಮಕ ಸವಲತ್ತುಗಳು ನಿರಾಕರಿಸಲ್ಪಟ್ಟಾಗ ಅವುಗಳನ್ನು ಮರಳಿ ಪಡೆಯಲು ಹೋರಾಡುವುದು ನಮ್ಮ ಹಕ್ಕು. ಕೇರಳ ಸರಕಾರ ಈ ಬಗ್ಗೆ ತಿಳಿದುಕೊಂಡು ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಬೇಕಾಗಿದೆ ಎಂದು ಕರ್ನಾಟಕ ಸಮಿತಿಯ ಅಧ್ಯಕ್ಷ, ನ್ಯಾಯವಾದಿ ಮುರಳೀಧರ ಬಳ್ಳಕುರಾಯ ಹೇಳಿದರು.
ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಆಶ್ರಯದಲ್ಲಿ ನಡೆದ ಕಾಸರಗೋಡು ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಶ್ವದಾಖಲೆ ಸೃಷ್ಟಿಸಿದ ಶಾಸ್ತ್ರೀಯ ನೃತ್ಯ ಕಲಾವಿದೆ ಮಂಗಳೂರಿನ ರೆಮೊನಾ ಇವೆಟ್ ಪೆರೆರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಮತ್ತು ಕಾಸರಗೋಡು ಕನ್ನಡಿಗರ ಪರವಾಗಿ ರೆಮೊನಾ ಅವರನ್ನು ಗೌರವಿಸಲಾಯಿತು.
ಕಾಸರಗೋಡು ಶೋಕಮಾತಾ ದೇವಾಲಯದ ಧರ್ಮಗುರು ಅತಿವಂದನೀಯ ಲೂಯಿಸ್ ಕುಟಿನ್ಹಾರವರ ಶುಭಾಶೀರ್ವಾದದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಧಾರ್ಮಿಕ ಮುಂದಾಳು ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ನಗರ ಸಭಾ ಕೌನ್ಸಿಲರ್ ವರಪ್ರಸಾದ್ ಕೋಟೆಕಣಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಕನ್ನಡ ಹಿತಚಿಂತಕ, ಲೋಕಸೇವಾ ಆಯೋಗದ ನಿವೃತ್ತ ಅಂಡರ್ ಸೆಕ್ರೆಟರಿ ಗಣೇಶ್ ಪ್ರಸಾದ್ ಪಾಣೂರು ಅವರಿಗೆ ಕಾಸರಗೋಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಹೋರಾಟಗಾರ, ನ್ಯಾಯವಾದಿ ಯು.ಪಿ, ಕುಣಿಕುಳ್ಳಾಯರಿಂದ ಪ್ರೇರಣೆ ಪಡೆದು ಕನ್ನಡ ಕೆಲಸವನ್ನು ನಿರ್ವಹಿಸುತ್ತಾ ಬಂದಿರುವ ತನಗೆ ಇಂದು ಪ್ರಥಮವಾಗಿ ಗೌರವ ಲಭಿಸಿರುವುದು ಮಹಾಭಾಗ್ಯವೆಂದು ಗಣೇಶ್ ಪ್ರಸಾದ್ ಹೇಳಿದರು. ವೈವಾಹಿಕ ಜೀವನದ ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ದಂಪತಿಗಳನ್ನು ಅಭಿನಂದಿಸಲಾಯಿತು. ಗಣೇಶ್ ಪ್ರಸಾದ್ ಕುರಿತಾಗಿ ವೀಜಿ ಕಾಸರಗೋಡು ಅಭಿನಂದನಾ ಭಾಷಣ ಮಾಡಿದರು.
ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದುಷಿ ಕಾವ್ಯ ಭಟ್ ಪೆರ್ಲ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಗ್ರಾಮದ ಕಾವ್ಯಕುಶಲ ವಂದಿಸಿದರು. ದಿವಾಕರ ಪಿ. ಅಶೋಕ ನಗರ ಕನ್ನಡ ಗೀತೆಗಳನ್ನು ಹಾಡಿದರು. ಡಾ. ವಾಣಿಶ್ರೀ ನಿರ್ದೇಶನದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ಸಾಹಿತ್ಯ ಗಾನ ನೃತ್ಯ ವೈಭವ ಜರಗಿತು. ಅಭಿಲಾಷ್ ಮುಕುಂದರಾಜ್ ನಿರೂಪಿಸಿದರು.