ಮಂಜೇಶ್ವರ : ಸಾರಿಗೆ ಬಸ್ಸಿನಲ್ಲಿ ಸಂಚರಿಸುತಿದ್ದ ವಿದ್ಯಾರ್ಥಿನಿಗೆ ನಿರ್ವಾಹಕ ಕಿರುಕುಳ ನೀಡಿದ್ದಾನೆ. ಇದನ್ನು ಪ್ರಶ್ನಿಸಿದ ವಿದ್ಯಾರ್ಥಿನಿಯನ್ನು ಇತರ ಪ್ರಯಾಣಿಕರ ಮುಂದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದಾರಿ ಮಧ್ಯೆ ಕೆಳಗಿಳಿಸಿರುವುದಾಗಿ ವಿದ್ಯಾರ್ಥಿನಿ ದೂರಿದ್ದಾಳೆ.
ಮಂಗಳವಾರ ಬೆಳಿಗ್ಗೆ ಬಂದ್ಯೋಡ್ ನಲ್ಲಿ ಈ ಘಟನೆ ನಡೆದಿದೆ.
ಗಡಿ ಪ್ರದೇಶದಲ್ಲಿರುವ ಕಾಲೇಜೊಂದರಲ್ಲಿ ಅಂತಿಮ ಬಿ ಸಿ ಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಬಂದ್ಯೋಡ್ ನಿಂದ ಕರ್ನಾಟಕ ಸಾರಿಗೆ ಬಸ್ಸು ನೋಂದಣಿ ಸಂಖ್ಯೆ ಕೆ ಎ 19 ಎಫ್ 3421 ಬಸ್ಸಿಗೆ ಹತ್ತಿದ್ದಾಳೆ. ಇಂತಹ ಪ್ರಯಾಣದ ಸಮಯದಲ್ಲಿ, ಹಿಂದೆಯೂ ನನ್ನೊಂದಿಗೆ ತಪ್ಪಾಗಿ ವರ್ತಿಸಿದ್ದ ಬಸ್ ನಿರ್ವಾಹಕ ಇಂದ ಕೂಡಾ ವಿದ್ಯಾರ್ಥಿನಿಯನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಅನುಚಿತ ವರ್ತನೆ ನಡೆಸಿರುವುದಾಗಿ ದೂರಲಾಗಿದೆ. ಇದನ್ನು ಪ್ರಶ್ನಿಸಿದ ವಿದ್ಯಾರ್ಥಿನಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೆಳಗಿಳಿಸಿರುವುದಾಗಿ ದೂರಲಾಗಿದೆ.
ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರ ಮುಂದೆ ಅಪಮಾನದ ರೀತಿಯಲ್ಲಿ ಮಾತನಾಡಿ ಕಿರುಕುಳ ನೀಡಿದ್ದಾನೆನ್ನಲಾಗಿದೆ. ಕಾಲೇಜು ವಿದ್ಯಾರ್ಥಿನಿ ಹಾಗೂ ಮಹಿಳೆ ಎಂಬುದನ್ನೂ ಪರಿಗಣಿಸದೇ ಅವಮಾನ ಮಾಡಿರುವುದಾಗಿ ವಿದ್ಯಾರ್ಥಿನಿ ಹೇಳುತಿದ್ದಾಳೆ.
ಬಸ್ ಚಾಲಕ ಕೂಡ ನಿರ್ವಾಹಕನಿಗೆ ಬೆಂಬಲವಾಗಿ ವಿದ್ಯಾರ್ಥಿನಿ ಮೇಲೆ ಅವಮಾನಕಾರಿ ರೀತಿಯಲ್ಲಿ ಮಾತನಾಡಿ ಹಿಂಸಾತ್ಮಕವಾಗಿ ವರ್ತಿಸಿದ್ದಾನೆನ್ನಲಾಗಿದೆ.
ಈ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಾಗಿ ತನಿಖೆ ನಡೆಯುತ್ತಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ ಬಸ್‌ನ ಕಂಡಕ್ಟರ್ ಹಾಗೂ ಡ್ರೈವರ್ ವಿರುದ್ಧ ಸೂಕ್ತ ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆಯೂ ಈ ಘಟನೆಗೆ ಸಂಬಂಧಿಸಿದ ತನಿಖೆ ಮಾಡಿ, ಇಂತಹ ವರ್ತನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟವರಲ್ಲಿ ವಿನಂತಿಸಿಕೊಂಡಿದ್ದಾಳೆ.