ಕಾಸರಗೋಡು:ವೆಳ್ಳಾಟಂನಲ್ಲಿ ಗುರಾಣಿಯಿಂದ ಹೊಡೆಯುವುದು ಸಂಪ್ರದಾಯವಾಗಿದ್ದು, ಶನಿವಾರದಂದು ಯುವಕನೋರ್ವನಿಗೆ ಬಿದ್ದ ಗುರಾಣಿ ಹೊಡೆತ ಪ್ರಕರಣವನ್ನು ಇತ್ಯರ್ಥ ಮಾಡಲಾಗಿದೆ.ನೀಲೇಶ್ವರದ ಪಲ್ಲಿಕ್ಕರದಲ್ಲಿರುವ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವದ ವೇಳೆ ನಡೆದ ತೆಯ್ಯಂ ಆಚರಣೆಯಲ್ಲಿ ಮರದ ಗುರಾಣಿಯಿಂದ ತಲೆಗೆ ಬಿದ್ದ ಹೊಡೆತದಿಂದ ಯುವಕನೊಬ್ಬ ಕುಸಿದು ಬಿದ್ದ ಘಟನೆ ಶನಿವಾರ ನಡೆದಿತ್ತು.ತೆಯ್ಯಂ ವೇಳೆ ಸಾಂಪ್ರದಾಯಿಕವಾಗಿ ಒಂದು ಕೈಯಲ್ಲಿ ಕತ್ತಿ ಹಾಗೂ ಇನ್ನೊಂದು ಕೈಯಲ್ಲಿ ಮರದ ಗುರಾಣಿ ಹಿಡಿದು ಲಯಬದ್ಧ ಹಾಗೂ ತೀವ್ರ ಚಲನೆಯಲ್ಲಿ ನರ್ತನ ಇರುತ್ತದೆ.
ಸಂಪ್ರದಾಯದ ಭಾಗವಾಗಿ, ತೆಯ್ಯಂ ದೈವ ದೇವಾಲಯದ ಧಾರ್ಮಿಕ ಸಹಾಯಕರಾದ ‘ವರ್ಕ’ರನ್ನು ಹಾಗೂ ಕೆಲವೊಮ್ಮೆ ಪ್ರೇಕ್ಷಕರನ್ನೂ ಗುರಾಣಿಯಿಂದ ಹೊಡೆಯುವ ರೂಢಿಯಿದೆ. ದೈವದ ಸುತ್ತ ಒಟ್ಟುಗೂಡಿ, ಹೊಡೆತಗಳನ್ನು ಸ್ವೀಕರಿಸುತ್ತಾ ಆಚರಣೆಯ ತೀವ್ರತೆಯನ್ನು ಹೆಚ್ಚಿಸುತ್ತಾರೆ.ಆದರೆ ಈ ಬಾರಿ, ಪೂಮಾರುತನ್ ತೆಯ್ಯಂ ಹಿಡಿದ ಮರದ ಗುರಾಣಿಯ ಹೊಡೆತ ಸ್ಥಳೀಯ ನಿವಾಸಿ ಮನು ಅವರ ತಲೆಗೆ ತೀವ್ರವಾಗಿ ಬಿದ್ದ ಪರಿಣಾಮ ಅವರು ತಕ್ಷಣವೇ ಕುಸಿದು ಪ್ರಜ್ಞೆ ಕಳೆದುಕೊಂಡರು. ಇದನ್ನು ಗಮನಿಸಿದ ಭಕ್ತರು ತಕ್ಷಣ ವೆಳ್ಳಾಟಂ ನಿಲ್ಲಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು.
ಗಾಯಗೊಂಡ ಯುವಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಗಂಭೀರ ಗಾಯಗಳಿಲ್ಲವೆಂದು ವೈದ್ಯರು ದೃಢಪಡಿಸಿದ್ದು, ಚಿಕಿತ್ಸೆ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ. ಮನುವಿನ ಸಂಬಂಧಿಕರು ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ಹಬ್ಬದ ಆಚರಣೆಗಳ ವೇಳೆ ಹೆಚ್ಚು ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳು ಹಾಗೂ ಸ್ಪಷ್ಟ ನಿಯಂತ್ರಣ ಅಗತ್ಯವಿದೆ ಎಂಬ ಆಗ್ರಹ ಕೇಳಿಬಂದಿದೆ. ತೆಯ್ಯಂ ಹಾಗೂ ‘ವೆಳ್ಳಾಟ್ಟಂ’ ದೇವಾಲಯದ ಸಂಪ್ರದಾಯಗಳ ಅವಿಭಾಜ್ಯ ಅಂಗವಾಗಿದ್ದರೂ, ಪ್ರದರ್ಶಕರು, ಧಾರ್ಮಿಕ ಸಹಾಯಕರು ಹಾಗೂ ಪ್ರೇಕ್ಷಕರ ಸುರಕ್ಷತೆ ಖಚಿತಪಡಿಸುವ ಅಗತ್ಯವಿದೆ ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಘಟನೆ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಲಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ . ಕಳೆದ ಫೆಬ್ರವರಿಯಲ್ಲಿ ಕಣ್ಣೂರು ಜಿಲ್ಲೆಯ ತಿಲ್ಲಂಕೇರಿಯಲ್ಲಿ ತೆಯ್ಯಂ ಆಚರಣೆಯಲ್ಲಿ ಓಡಿಹೋಗುತ್ತಿದ್ದ ಮಗುವಿಗೆ ಗಾಯವಾದ ಬಳಿಕ ಭಕ್ತರು ತೆಯ್ಯಂ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿತ್ತು. 2019ರ ನವೆಂಬರ್‌ನಲ್ಲಿ ಕಾಸರಗೋಡು ಜಿಲ್ಲೆಯ ಕಾಞಂಗಾಡ್‌ನ ಅರೈಲ್ ದೇವಿ ದೇವಸ್ಥಾನದಲ್ಲಿ ಮೂವಲಂಕುಳಿ ಚಾಮುಂಡಿ ತಯ್ಯಂ ಆಚರಣೆಯ ವೇಳೆ ಭಕ್ತರ ಮೇಲೆ ಲಾಠಿಯಿಂದ ಹೊಡೆದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿತ್ತು.ಇದಲ್ಲದೆ, ಕೆಲ ಪ್ರದೇಶಗಳಲ್ಲಿ ನಡೆಯುವ ಗುಳಿಕನ್ ತೆಯ್ಯಂ ಮಕ್ಕಳನ್ನು ಸುಡುವ ಪಂಜಿನೊಂದಿಗೆ ಬೆನ್ನಟ್ಟುವ ಆಚರಣೆಯೂ ಸುರಕ್ಷತಾ ಕಾರಣಗಳಿಂದ ಟೀಕೆಗೆ ಗುರಿಯಾಗುತ್ತಿದೆ.