ಮಂಜೇಶ್ವರ : ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿರಾಮದ ಬಳಿಕ ಮತ್ತೆ ಕಳ್ಳರ ಹಾವಳಿ ಆರಂಭಗೊಂಡಿದೆ.ಸೋನಾ ಬಜಾರ್ ಜ್ಯುವೆಲ್ಲರಿ ಮಾಲಕ ದಿ. ಮಮ್ಮಿಣ್ಣಿ ಹಾಜಿ ಅವರ ಕುಂಬಳೆ ಪೇಟೆಯಲ್ಲಿರುವ ಮನೆಗೆ ನಿನ್ನೆ ಕಳ್ಳರು ಲಗ್ಗೆ ಇಟ್ಟಿದ್ದಾರೆ.
ಮನೆಯವರು ಚೆಂಗಳದಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ಸಮಯದಲ್ಲಿ ಮಧ್ಯಾಹ್ನ 2 ಗಂಟೆಗೆ ಮನೆಗೆ ಬೀಗ ಹಾಕಲಾಗಿತ್ತು. ರಾತ್ರಿ 12ರ ವೇಳೆಗೆ ಮರಳಿದಾಗ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿರುವುದು ಪತ್ತೆಯಾಗಿದೆ. ಕಳ್ಳರು ಎರಡು ಕಪಾಟುಗಳನ್ನು ಮುರಿದು ಬಟ್ಟೆಬರೆಗಳನ್ನು ಚಲ್ಲಾಪಿಲ್ಲಿ ಮಾಡಿದ್ದು, ಬೆಲೆಬಾಳುವ ಎರಡು ವಾಚ್‌ಗಳನ್ನು ಕಳವು ಮಾಡಿದ್ದಾರೆ. ಅಡುಗೆ ಕೋಣೆಯ ಬಾಗಿಲನ್ನೂ ಮುರಿದು, ಬೀಗಗಳೊಂದಿಗೆ ಪರಾರಿಯಾಗಿದ್ದಾರೆ.
ಇದೇವೇಳೆ, ಕುಂಬಳೆ ಪೇಟೆಯಲ್ಲಿರುವ ಕುಂಟಂಗೇರಡ್ಕದ ರಮೇಶ್ ನಾಯ್ಕರ ಸ್ಟೇಶನರಿ ಅಂಗಡಿಯಲ್ಲೂ ಕಳ್ಳತನ ನಡೆದಿದೆ. ಬೀಗ ಮುರಿದು ಒಳನುಗ್ಗಿದ ಕಳ್ಳರು 6 ಸಾವಿರ ರೂ. ನಗದು ಕಳವು ಮಾಡಿದ್ದಾರೆ. ಈ ಅಂಗಡಿಯಲ್ಲಿ ಇದು ನಾಲ್ಕನೇ ಬಾರಿ ನಡೆದ ಕಳ್ಳತನವಾಗಿದೆ. ಎರಡೂ ಪ್ರಕರಣಗಳಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.