ರಾಷ್ಟ್ರಮಟ್ಟದಲ್ಲಿ ಮಿಂಚಿದ ವಿಟ್ಲದ ಈಜುಗಾರ್ತಿ ಶ್ರೀಲಕ್ಷ್ಮಿ

ವಿಟ್ಲ: ರಾಷ್ಟ್ರಮಟ್ಟದ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿರುವ ವಿಟ್ಲದ ಪ್ರತಿಭಾವಂತ ಈಜುಗಾರ್ತಿ ಶ್ರೀಲಕ್ಷ್ಮಿ ಅವರು ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದಾರೆ.

ವಿಟ್ಲದ ಹಿತ್ಲು ಕೋಟಿಕೆರೆ ನಿವಾಸಿಗಳಾದ ದಿವಂಗತ ಗೋಪಿಕಾ ಸಪಲ್ಯ ಮತ್ತು ಲೀಲಾವತಿ ದಂಪತಿಗಳ ತೃತೀಯ ಪುತ್ರಿಯಾದ ಶ್ರೀಲಕ್ಷ್ಮಿ ಬಾಲ್ಯದಲ್ಲಿಯೇ ಈಜು ಕ್ರೀಡೆಗೆ ಆಸಕ್ತಿ ಬೆಳೆಸಿಕೊಂಡರು. ಈಜಿನಲ್ಲಿ ಸಾಧನೆಗೈಯುವ ದಿಟ್ಟ ಸಂಕಲ್ಪ ಹೊಂದಿದ್ದ ಅವರಿಗೆ ತಂದೆಯೇ ಮೊದಲ ಗುರು ಆಗಿದ್ದು, ಬಳಿಕ ಉಮೇಶ್ ಗಾಣಿಗ ವಿಟ್ಲ ಹಾಗೂ ತುಳಸಿದಾಸ್ ಶೆಣೈ ಅವರಿಂದ ತರಬೇತಿ ಪಡೆದು ಕ್ರೀಡೆಯಲ್ಲಿ ಮುಂದುವರೆದಿದ್ದಾರೆ.

ಆರನೇ ವಯಸ್ಸಿನಲ್ಲಿಯೇ, ಅಂದರೆ ಪ್ರಥಮ ತರಗತಿಯಲ್ಲಿ ಓದುತ್ತಿದ್ದಾಗಲೇ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಹಾಗೂ ಪದಕ ಗೆದ್ದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಶ್ರೀಲಕ್ಷ್ಮಿ ಅವರು ಪ್ರಾಥಮಿಕ ಶಿಕ್ಷಣವನ್ನು ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲದಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಮಂಗಳೂರಿನ ಅಮೃತ ಕಾಲೇಜು ಪಡೀಲಿನಲ್ಲಿ ತೃತೀಯ ವರ್ಷದ ವಾಣಿಜ್ಯ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.

ಶಾಲಾ ಶಿಕ್ಷಣದ ಅವಧಿಯಲ್ಲಿಯೇ ಅವರು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಈಜು ಸ್ಪರ್ಧೆಗಳಲ್ಲಿ ಹಲವು ಬಾರಿ ವಿಜೇತರಾಗಿ ಹೆಮ್ಮೆ ಪಡೆದಿದ್ದಾರೆ. ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾಗಲೇ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸ್ಪರ್ಧಾಳುವಾಗಿ ಗುರುತಿಸಿಕೊಂಡಿದ್ದಾರೆ.

ಪುತ್ತೂರು ಮತ್ತು ಮಂಗಳೂರು ಸೇರಿದಂತೆ ಹಲವಾರು ಸಂಘಟನೆಗಳು ಹಾಗೂ ಗಾಣಿಗ ಸಂಗಮ ಮತ್ತು ಜೆ.ಸಿ ಸಪ್ತಾಹ ಕಾರ್ಯಕ್ರಮಗಳಲ್ಲಿ ಅವರನ್ನು ಸನ್ಮಾನಿಸಲಾಗಿದೆ.

ಪುತ್ತೂರಿನ ಬಾಲವನದಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ 800 ಮೀ ಫ್ರೀಸ್ಟೈಲ್ ವಿಭಾಗದಲ್ಲಿ ದ್ವಿತೀಯ, 400 ಮೀ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಹಾಗೂ 200 ಮೀ ವೈಯಕ್ತಿಕ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಮೂರು ವೈಯಕ್ತಿಕ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ತಮ್ಮ ಪ್ರತಿಭೆಯನ್ನು ಮೆರೆಯಿದರು.

ಪ್ರಸ್ತುತ ತಮ್ಮ ವಿದ್ಯಾಭ್ಯಾಸದ ಜೊತೆಗೆ ಮಂಗಳೂರಿನ ಮಂಗಳಾದೇವಿ ಕ್ರೀಡಾಂಗಣದ ಈಜುಕೊಳದಲ್ಲಿ ಹಲವು ಮಕ್ಕಳಿಗೆ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

SHARE
Loading spinner

3 thoughts on “ರಾಷ್ಟ್ರಮಟ್ಟದಲ್ಲಿ ಮಿಂಚಿದ ವಿಟ್ಲದ ಈಜುಗಾರ್ತಿ ಶ್ರೀಲಕ್ಷ್ಮಿ

Leave a Reply

Your email address will not be published. Required fields are marked *

error: Content is protected !!