ಖಗ ಪ್ರೇಮಿಗಳಿಗೆ ಸಿಹಿ ಸುದ್ದಿ ಜನವರಿ 9 ರಿಂದ 11 ರವರೆಗೆ ಮಂಗಳೂರಿನಲ್ಲಿ 12ನೇ ಕರ್ನಾಟಕ ಪಕ್ಷಿ ಉತ್ಸವ ಹಕ್ಕಿ ಹಬ್ಬ .. !

ಮಂಗಳೂರು:12ನೇ ಕರ್ನಾಟಕ ಹಕ್ಕಿ ಹಬ್ಬವು ಜನವರಿ 9 ರಿಂದ 11 ರವರೆಗೆ ಮಂಗಳೂರಿನಲ್ಲಿ ನಡೆಯಲಿದ್ದು ಇದರ ಉದ್ಘಾಟನೆಯು ಪಿಲಿಕುಳದಲ್ಲಿ ನಡೆಯಲಿದೆ ಎಂದು ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆಯಾದ ಶಾಲೆಟ್ ಪಿಂಟೊ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಮೂರು ದಿನಗಳ ಹಕ್ಕಿ ಹಬ್ಬದಲ್ಲಿ ಹಕ್ಕಿಗಳ ಸಂರಕ್ಷಣೆ, ಪರಿಸರ ಜಾಗೃತಿ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಹಕ್ಕಿ ಹಬ್ಬವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ , ವಿಧಾನಸಭೆ ಸಭಾಧ್ಯಕ್ಷರಾದ ಯು ಟಿ ಖಾದರ್ ಸಹಿತ ಹಲವು ಗಣ್ಯರು ಈ ಸಮಯದಲ್ಲಿ ಭಾಗವಹಿಸಲಿದ್ದಾರೆ ಎಂದರು .

ಕರ್ನಾಟಕವು 5೦೦ ಕ್ಕೂ ಹೆಚ್ಚು ಪ್ರಭೇದ ಪಕ್ಷಿಗಳಿಗೆ ನೆಲೆಯಾಗಿದ್ದು, ಇದು ದೇಶದ ಅತ್ಯಂತ ಶ್ರೀಮಂತ ಪಕ್ಷಿ ವೈವಿಧ್ಯತೆಯ ಪ್ರದೇಶಗಳಲ್ಲಿ ಒಂದಾಗಿದೆ. ಪಕ್ಷಿ ವೀಕ್ಷಣೆಯನ್ನು ಉತ್ತೇಜಿಸುವುದು, ಪಕ್ಷಿ ವೈವಿಧ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಹುಲಿ ಕೇಂದ್ರಿತ ಪ್ರವಾಸೋದ್ಯಮದ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ (ಕೆಇಡಿಬಿ), ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದೆ ಎಂದರು .

ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಆಂಥೋನಿ ಎಸ್ . ಮರಿಯಪ್ಪ ಮಾತನಾಡಿ , ಹಕ್ಕಿ ಹಬ್ಬದ ಅಂಗವಾಗಿ ಭಾಗವಹಿಸುವವರಿಗೆ ಪಿಲಿಕುಳ , ಮುಕ್ಕ , ಸಸಿಹಿತ್ತಿಲು , ಕೊಣಾಜೆ , ಕೆಂಜಾರು ಸಹಿತ ಒಟ್ಟು ೧೨ ಪ್ರದೇಶಗಳ ಹಕ್ಕಿಗಳ ವೀಕ್ಷಣೆಗೆ ಈ ಹಬ್ಬದಲ್ಲಿ ಭಾಗವಹಿಸುವವರಿಗೆ ಅವಕಾಶವನ್ನು ಕಲ್ಪಿಸಲಾಗಿದೆ . ಸಮುದ್ರ ತೀರ , ಜೌಗು ಪ್ರದೇಶ , ಕಾಡು ಪ್ರದೇಶ , ಕಾಂಡ್ಲಾ ಪ್ರದೇಶಗಳಲ್ಲಿ ಕಾಣ ಸಿಗುವ ಅಲೆಮಾರಿ ಹಕ್ಕಿಗಳ ಪರಿಚಯ ಮತ್ತು ಅವುಗಳ ಕುರಿತು ಕಾರ್ಯಾಗಾರವನ್ನು ಆಯೋಜಿಲಾಗಿದೆ ಎಂದರು .ಈ ಬಾರಿ ಬಿಳಿ ಹೊಟ್ಟೆಯ ಮೀನು ಗಿಡುಗ (ಹ್ಯಾಲಿಯೇಟಸ್ ಲ್ಯೂಕೊಗ್ಯಾಸ್ಟರ್) 12 ನೇ ಕರ್ನಾಟಕ ಹಕ್ಕಿ ಹಬ್ಬದ ರಾಯಭಾರಿ ಹಕ್ಕಿಯಾಗಿದೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಹಕ್ಕಿ ಹಬ್ಬ ಸಮಿತಿಯ ಸದಸ್ಯರಾದ ರಾಹುಲ್ , ಲಾವಣ್ಯ ಸಹಿತ ಮುಂತಾದವರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!