ಕಾಸರಗೋಡಿನಲ್ಲಿ ಗಡಿನಾಡು ಕನ್ನಡ ಸಮ್ಮೇಳನ-2026 ಯಶಸ್ವಿಕನ್ನಡ ಉಳಿವಿಗೆ ಮನೆಮನೆಯಲ್ಲೇ ಕನ್ನಡದ ಅನುಷ್ಠಾನ ಅಗತ್ಯ: ಎಡನೀರು ಶ್ರೀ

ಕಾಸರಗೋಡು: ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ–2026 ರಜತ ಸಂಭ್ರಮದ ಅಂಗವಾಗಿ ವಿಜೃಂಭಣೆಯಿಂದ ನಡೆಯಿತು.

ಪ್ರಥಮ ಚುನಾಯಿತ ಕ.ಸಾ.ಪ. ಕಾಸರಗೋಡು ಜಿಲ್ಲಾಧ್ಯಕ್ಷೆ ದಿವಂಗತ ಡಾ. ಲಲಿತಾ ಎಸ್.ಎನ್. ಭಟ್ ವೇದಿಕೆಯಲ್ಲಿ ನಡೆದ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಡಾ. ಸಿ. ಸೋಮಶೇಖರ್, ಐಎಎಸ್ ವಹಿಸಿದ್ದರು.

ಕಾರ್ಯಕ್ರಮವನ್ನು ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗಡಿನಾಡಿನಲ್ಲಿ ವಾಮನ್ ರಾವ್ ಬೇಕಲ್ ಅವರು ನಿರಂತರ ಕನ್ನಡ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಶ್ಲಾಘನೀಯ ಎಂದರು. ಕಾಸರಗೋಡು ಭಾವನಾತ್ಮಕವಾಗಿ ಕರುನಾಡಿನೊಂದಿಗೆ ಬೆಸೆದುಕೊಂಡಿದ್ದು, “ನಡೆ ಕನ್ನಡ, ನುಡಿ ಕನ್ನಡ, ಗುಡಿ ಕನ್ನಡ” ಎಂಬ ಧ್ಯೇಯ ಮನೆಮನೆಯಲ್ಲೂ ಸಾಕಾರಗೊಳ್ಳಬೇಕು ಎಂದು ಕರೆ ನೀಡಿದರು.

ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವಂತೆ ಪೋಷಕರು ಪ್ರೋತ್ಸಾಹಿಸಬೇಕು. ಕನ್ನಡ ಭಾಷೆ ಕೇವಲ ಶಿಕ್ಷಣವನ್ನಷ್ಟೇ ಅಲ್ಲ, ಉತ್ತಮ ಸಂಸ್ಕಾರವನ್ನೂ ನೀಡುತ್ತದೆ. ಮನೆಯಲ್ಲಿ ಕನ್ನಡದ ಬಳಕೆ ಹೆಚ್ಚಿದರೆ ಗಡಿನಾಡಿನಲ್ಲಿ ಕನ್ನಡದ ಉಳಿವು ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲಿ ಡಾ. ಸಿ. ಸೋಮಶೇಖರ್ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಲಿ ಎಂಬ ಆಶಯವನ್ನೂ ವ್ಯಕ್ತಪಡಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷ ಡಾ. ಸಿ. ಸೋಮಶೇಖರ್ ಮಾತನಾಡಿ, ಸಮ್ಮೇಳನದ ಮೂಲ ಆಶಯವೇ ಕನ್ನಡ ಮನಸ್ಸುಗಳ ಸಮ್ಮಿಲನ ಎಂದರು. ಗಡಿನಾಡಿನಲ್ಲಿ ಕನ್ನಡ ಸಂಸ್ಕೃತಿ, ಯಕ್ಷಗಾನ ಹಾಗೂ ಸಾಹಿತ್ಯ ಪರಂಪರೆಯನ್ನು ಉಳಿಸುವಲ್ಲಿ ಎಡನೀರು ಮಠ ಮತ್ತು ವಾಮನ್ ರಾವ್–ಸಂಧ್ಯಾರಾಣಿ ದಂಪತಿ ಸಲ್ಲಿಸಿರುವ ಸೇವೆ ಅನನ್ಯವಾಗಿದೆ ಎಂದು ಶ್ಲಾಘಿಸಿದರು. ಕನ್ನಡ ಸಾಹಿತ್ಯ ಪರಿಷತ್ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಇದೇ ವೇಳೆ ಘೋಷಿಸಿದರು.

ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಮಾತನಾಡಿ, ಗಡಿನಾಡಿನಲ್ಲಿ ಹಲವು ದಶಕಗಳಿಂದ ಕನ್ನಡ ಉಳಿವಿಗಾಗಿ ಹೋರಾಟ ನಡೆಸುತ್ತಿರುವುದಾಗಿ ಹೇಳಿದರು. “ಕಾಸರಗೋಡಿನಲ್ಲಿ ಕನ್ನಡದ ಅಸ್ತಿತ್ವ ಇನ್ನೂ ಜೀವಂತವಾಗಿದೆ. ಪ್ರಶಸ್ತಿ ನೀಡುವುದು ಮಾತ್ರವಲ್ಲ, ಕನ್ನಡ ಮನಸ್ಸುಗಳನ್ನು ಒಂದಾಗಿಸುವ ಪ್ರಯತ್ನವೇ ನಮ್ಮ ಧ್ಯೇಯ” ಎಂದು ತಿಳಿಸಿದರು.

ಸಮಾರಂಭದಲ್ಲಿ ಗಣ್ಯ ಅಥಿತಿಗಳಾದ ಸಂಧ್ಯಾರಾಣಿ ಟೀಚರ್ , ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಡಾ. ಬಾಲಕೃಷ್ಣ ಎಸ್. ಮದ್ದೋಡಿ, ಪಮ್ಮಿ ಕೊಡಿಯಾಲ್ ಬೈಲ್, ಪ್ರಕಾಶ್ ಮತ್ತೀಹಳ್ಳಿ , ಎ .ಆರ್. ಸುಬ್ಬಯ ಕಟ್ಟೆ , ಇರಾ ನೇಮು ಪೂಜಾರಿ, ಬಿ.ಕೆ. ಮಾಧವ ರಾವ್, ಎನ್. ವಿಜಯಕುಮಾರ್, ಡಾ. ಸುರೇಶ್ ನೆಗಳಗುಳಿ , ವಿಶಾಲಾಕ್ಷ ಪುತ್ರಕಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!