ಕರಾವಳಿ ಉತ್ಸವದ ಅಂಗವಾಗಿ ಜ.19–21ರವರೆಗೆ ಕರಾವಳಿ ಚಲನಚಿತ್ರೋತ್ಸವ, ಜ.25ರಂದು ಕುಡ್ಲ ಶ್ವಾನ ಪ್ರದರ್ಶನ

ಮಂಗಳೂರು:ಹಲವು ವಿಶೇಷತೆಗಳೊಂದಿಗೆ ಪ್ರಶಕ್ತ ಸಾಲಿನ ಕರಾವಳಿ ಉತ್ಸವ ಜನಮನ್ನಣೆ ಗಳಿಸುತ್ತಿರುವ ಬೆನ್ನಲ್ಲೇ ಜಿಲ್ಲಾಡಳಿತವು ಈ ಬಾರಿ ತುಳು, ಕನ್ನಡ, ಕೊಂಕಣಿ ಹಾಗೂ ಬ್ಯಾರಿ ಭಾಷೆಗಳ ಕರಾವಳಿ ಚಲನಚಿತ್ರ ಉತ್ಸವವನ್ನು ಜ.19ರಿಂದ 21ರವರೆಗೆ ಆಯೋಜಿಸಲಾಗಿದ್ದು , ಭಾರತ್‌ ಸಿನೆಮಾಸ್‌ ಒಂದರಲ್ಲಿ ಒಟ್ಟು 18 ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ತುಳು ಭಾಷೆಯ ಬೆಳವಣಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಬಾರಿ 11 ತುಳು ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.

ಅವರು ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ಜ.19ರಂದು ಬೆಳಗ್ಗೆ 9 ಗಂಟೆಗೆ ಚಲನಚಿತ್ರೋತ್ಸವ ಉದ್ಘಾಟನೆಗೊಳ್ಳಲಿದೆ ಎಂದರು.ಇತ್ತೀಚೆಗೆ ನಾಡಿನಾದ್ಯಂತ ಭರ್ಜರಿ ಪ್ರದರ್ಶನ ಕಂಡಿರುವ ‘ಸು ಪ್ರೋಂ ಸೊ’ ಚಿತ್ರ ಸೇರಿದಂತೆ ಮೂರು ದಿನಗಳ ಕಾಲ ಬೆಳಗ್ಗೆ 10ರಿಂದ ರಾತ್ರಿ 10.15ರವರೆಗೆ ಚಿತ್ರ ಪ್ರದರ್ಶನ ನಡೆಯಲಿದೆ.ಕರಾವಳಿ ಉತ್ಸವದ ಅಂಗವಾಗಿ ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಯೋಗದಲ್ಲಿ ಲಾಲ್‌ಬಾಗ್‌ನ ಕರಾವಳಿ ಉತ್ಸವ ಮೈದಾನದಲ್ಲಿ ಜ.25ರಂದು ಮಧ್ಯಾಹ್ನ 2 ಗಂಟೆಗೆ ಕುಡ್ಲ ಶ್ವಾನ ಪ್ರದರ್ಶನ ಆಯೋಜಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ವಿವಿಧ ಜಿಲ್ಲೆಗಳಿಂದ ಸುಮಾರು 25 ತಳಿಗಳ 300 ಶ್ವಾನಗಳು ಭಾಗವಹಿಸುವ ನಿರೀಕ್ಷೆಯಿದೆ. ಲ್ಯಾಬ್ರಡಾರ್, ಗೋಲ್ಡನ್ ರಿಟ್ರಿವರ್, ಜರ್ಮನ್ ಶೆಫರ್ಡ್, ರಾಟ್‌ವೀಲರ್, ಬೀಗಲ್, ಸೈಬೀರಿಯನ್ ಹಸ್ಕಿ ರಾಜಪಾಳ್ಯಂ, ಮಾಲ್ವಿಸ್, ಚಿಹುವಾಹುವಾ, ಡಾಲೇಶಿಯನ್, ಮುಧೋಳ್‌, ಪಗ್‌, ಡ್ಯಾಶ್‌ಹಂಡ್‌, ಡಾಬರ್‌ಮನ್, ಬಾಕ್ಸರ್, ಬುಲ್‌ಡಾಗ್, ಶಿಟ್ಟು ಪಿಟ್‌ಬುಲ್, ಪೊಮೆರಿಯನ್, ಲ್ಯಾಸಾ ಅಪ್ಪೋ, ಕಾಕರ್ ಸ್ಪಾನಿಯಲ್, ಗ್ರೇಟ್ ಡೇನ್ ಸೇರಿದಂತೆ ಸ್ಥಳೀಯ ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ.

ಪ್ರಥಮ ಬಾರಿಗೆ ಶ್ವಾನ ಪ್ರದರ್ಶನಕ್ಕೆ ಆನ್‌ಲೈನ್ ನೋಂದಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಆಸಕ್ತ ಶ್ವಾನ ಮಾಲಕರು ಜ.23ರ ಸಂಜೆ 5 ಗಂಟೆಯೊಳಗೆ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.ಶ್ವಾನಗಳನ್ನು ತಳಿವಾರು ಹಾಗೂ ವಯಸ್ಸಿನ ಆಧಾರದಲ್ಲಿ ವಿಂಗಡಿಸಿ ಸ್ಪರ್ಧೆ ನಡೆಸಲಾಗುತ್ತದೆ. 3-6 ತಿಂಗಳು, 6-12 ತಿಂಗಳು ಹಾಗೂ 12 ತಿಂಗಳ ಮೇಲ್ಪಟ್ಟ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

ಮೂರು ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುತ್ತದೆ. ಪ್ರತಿಯೊಂದು ವಿಭಾಗದ ಪ್ರಥಮ ಬಹುಮಾನ ವಿಜೇತರಿಗೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಅವಕಾಶ ದೊರೆಯಲಿದೆ. ಚಾಂಪಿಯನ್ ಸುತ್ತಿನಲ್ಲಿ ಪ್ರಥಮ ಬಹುಮಾನ ರೂ.25,000, ದ್ವಿತೀಯ ರೂ.20,000, ತೃತೀಯ ರೂ.15,000, ನಾಲ್ಕನೇ ರೂ.10,000 ಹಾಗೂ ಐದನೇ ರೂ.5,000 ನಗದು ಹಾಗೂ ಟ್ರೋಫಿ ನೀಡಲಾಗುತ್ತದೆ. ಪೊಲೀಸ್ ಶ್ವಾನದಳದಿಂದ ವಿಶೇಷ ಪ್ರದರ್ಶನವೂ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಸಿಇಒ ವಿನಾಯಕ ನರ್ವಾಡೆ ಕಾರ್ಬಾರಿ, ಅಪರ ಜಿಲ್ಲಾಧಿಕಾರಿ ರಾಜು, ಜಿಲ್ಲಾ ಯೋಜನಾ ನಿರ್ದೇಶಕ ಡಾ. ಸಂತೋಷ್ ಕುಮಾರ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ. ಅರುಣ್ ಕುಮಾರ್ ಉಪಸ್ಥಿತರಿದ್ದರು. ಈ ವೇಳೆ ಕರಾವಳಿ ಚಲನಚಿತ್ರ ಉತ್ಸವ ಹಾಗೂ ಶ್ವಾನ ಪ್ರದರ್ಶನದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು

SHARE
Loading spinner

Leave a Reply

Your email address will not be published. Required fields are marked *

error: Content is protected !!