ಮಂಗಳೂರು:ಗ್ರೀನ್ ಮೆಟ್ರಿಕ್ ಶ್ರೇಯಾಂಕವು ಹಸಿರು ಕ್ಯಾಂಪಸ್ ಮತ್ತು ಪರಿಸರ ಸುಸ್ಥಿರತೆಯನ್ನು ಆಧರಿಸಿ ಇಂಡೋನೇಷ್ಯಾ ವಿವಿ ಬಿಡುಗಡೆ ಮಾಡಿದ ಯುಐ ಗ್ರೀನ್ ಮೆಟ್ರಿಕ್ ವರ್ಲ್ಡ್ ಯುನಿವರ್ಸಿಟಿ ರಾಂಕ್ ನಲ್ಲಿ ಮಂಗಳೂರು ವಿ. ವಿ 2025 ನೇ ಸಾಲಿನಲ್ಲಿ ದೇಶದಲ್ಲೇ 3ನೇ ಅತ್ಯಂತ ಸುಸ್ಥಿರ ವಿಶ್ವವಿದ್ಯಾನಿಲಯ ಸ್ಥಾನ ಹಾಗೂ ಜಗತ್ತಿನಲ್ಲಿ 127ನೇ ಸ್ಥಾನವನ್ನು ಪಡೆಯುವ ಮೂಲಕ ವಿಶೇಷ ಮನ್ನಣೆಯನ್ನು ಪಡೆದಿದೆ .
ಭಾರತದ 100 ವಿಶ್ವವಿದ್ಯಾನಿಲಯಗಳು ವಿಶ್ವಾದ್ಯಂತ 105 ದೇಶಗಳಲ್ಲಿ 1745 ಸಂಸ್ಥೆಗಳು ಈ ಶ್ರೇಯಾಂಕದಲ್ಲಿ ಭಾಗವಹಿಸಿದ್ದವು.
ಮಂಗಳೂರು ವಿಶ್ವವಿದ್ಯಾನಿಲಯವು ವ್ಯವಸ್ಥೆ ಮತ್ತು ಮೂಲಸೌಕರ್ಯದಲ್ಲಿ ದೇಶದಲ್ಲಿ ಒಂದನೇ ಸ್ಥಾನದಲ್ಲಿದೆ. ಇಂಧನ ಮತ್ತು ಹವಾಮಾನ ಬದಲಾವಣೆಯಲ್ಲಿ ದೇಶದಲ್ಲಿ 4ನೇ ಸ್ಥಾನದಲ್ಲಿದೆ. ತ್ಯಾಜ್ಯ ನಿರ್ವಹಣೆಯಲ್ಲಿ ದೇಶದಲ್ಲಿ 6ನೇ ಸ್ಥಾನದಲ್ಲಿದೆ. ನೀರಿನ ವ್ಯವಸ್ಥೆಗಾಗಿ 6ನೇ ಸ್ಥಾನ ಶಿಕ್ಷಣ ಮತ್ತು ಸಂಶೋಧನೆಗಾಗಿ ದೇಶದಲ್ಲಿ 10ನೇ ಹಾಗೂ ಸಾರಿಗೆ ವ್ಯವಸ್ಥೆಗಾಗಿ ದೇಶದಲ್ಲಿ 11ನೇ ಸ್ಥಾನದಲ್ಲಿದೆ.
ವಿಶ್ವವಿದ್ಯಾನಿಲಯದ ಈ ಸಾಧನೆಗಾಗಿ ಎಲ್ಲಾ ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸುವುದಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.