ಕಲ್ಲರಕೋಡಿಯಲ್ಲಿ ನೂತನ ಪದವಿಪೂರ್ವ ಕಾಲೇಜು ಕಟ್ಟಡ ಉದ್ಘಾಟನೆ

ನರಿಂಗಾನ: ನರಿಂಗಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲರಕೋಡಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಉನ್ನತೀಕರಿಸಿದ ಪದವಿಪೂರ್ವ ಕಾಲೇಜು ಕಟ್ಟಡದ ಉದ್ಘಾಟನಾ ಸಮಾರಂಭ ವಿಜೃಂಭಣೆಯಿಂದ ನಡೆಯಿತು.

ನೂತನ ಕಾಲೇಜು ಕಟ್ಟಡವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ U. T. Khader ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಾಲೇಜು ಮಂಜೂರುಗೊಳಿಸುವುದಕ್ಕಿಂತ ಅದನ್ನು ಕಾರ್ಯರೂಪಕ್ಕೆ ತಂದು ಯಶಸ್ವಿಯಾಗಿ ನಡೆಸುವುದು ಮುಖ್ಯ ಎಂದು ಹೇಳಿದರು.

“ಕಲ್ಲರಕೋಡಿಗೆ ಕಾಲೇಜು ಮಂಜೂರಾದ ಬಳಿಕ ಅದನ್ನು ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿ. ಗ್ರಾಮದಲ್ಲಿ ಎರಡನೇ ಪದವಿಪೂರ್ವ ಕಾಲೇಜು ಸ್ಥಾಪನೆಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅಸಾಧ್ಯವೆನಿಸುವ ಕಾರ್ಯಗಳನ್ನು ಸಾಧ್ಯವಾಗಿಸುವುದೇ ನಮ್ಮ ಗುರಿ” ಎಂದು ಸಚಿವರು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಮೇಲಿನ ಮಹಡಿಯನ್ನು ಉದ್ಘಾಟಿಸಿದರು. ಬಂಟ್ವಾಳ ತಾಲೂಕು ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ತರಗತಿ ಕೊಠಡಿಯನ್ನು ಉದ್ಘಾಟಿಸಿದರು.

ಸಮಾರಂಭದಲ್ಲಿ ಬಂಟ್ವಾಳ ತಾಲೂಕು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ಕೆ., ನರಿಂಗಾನ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ, ನರಿಂಗಾನ ಬೋಳ ಸಂತ ಲಾರೆನ್ಸ್ ಚರ್ಚ್ ಧರ್ಮಗುರು ಫಾ. ಫೆಡ್ರಿಕ್ ಡಿಸೋಜ, ಸಮಾಜಸೇವಕ ಇಬ್ರಾಹಿಂ ಪಾರೆ, ಡಿಡಿಪಿಐ ಎಚ್.ಎಚ್. ರಾಜೇಶ್ವರಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಾಲೇಜು ಮಂಜೂರುಗೊಳಿಸಲು ಶ್ರಮಿಸಿದ ಸಚಿವ ಯು.ಟಿ. ಖಾದರ್, ಕಟ್ಟಡ ನಿರ್ಮಾಣದ ರೂವಾರಿ ಹಾಗೂ ನರಿಂಗಾನ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷ ನವಾಝ್ ನರಿಂಗಾನ, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.

ಇದೇ ವೇಳೆ, ಮೊಂಟೆಪದವು ಕೆಪಿಎಸ್ ಹಾಗೂ ಕಲ್ಲರಕೋಡಿ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು, ಪ್ರಥಮ ಪಿಯುಸಿ ವಿದ್ಯಾರ್ಥಿಗಳು, ನೂತನ ಶಿಕ್ಷಕ ವೃಂದ ಮತ್ತು ನಿವೃತ್ತ ಸಿಬ್ಬಂದಿಗಳಿಗೂ ಗೌರವ ಸಮರ್ಪಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಚೆಂಡೆವಾದನ, ಮಿಮಿಕ್ರಿ ಹಾಗೂ ಜಾದೂ ಪ್ರದರ್ಶನಗಳು ನಡೆಯುವ ಮೂಲಕ ಸಮಾರಂಭಕ್ಕೆ ವಿಶೇಷ ಮೆರುಗು ನೀಡಲಾಯಿತು.

ನರಿಂಗಾನ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ನವಾಝ್ ನರಿಂಗಾನ ಅಧ್ಯಕ್ಷತೆ ವಹಿಸಿ ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದರು. ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!