ಮಂಜೇಶ್ವರ: ಕುಂಜತ್ತೂರು ತೂಮಿನಾಡು ಲಕ್ಷಂವೀಡು ಕಾಲನಿಯಲ್ಲಿ ವಿದ್ಯುತ್ ಕಂಬಕ್ಕೆ ತಾಗಿಕೊಂಡಿದ್ದ ಮರವೊಂದನ್ನು ಮುರಿದು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದ ವೇಳೆ ಭೀಕರ ದುರ್ಘಟನೆ ಸಂಭವಿಸಿದೆ. ಮರವನ್ನು ಕಡಿದು ತೆಗೆಯುತ್ತಿರುವ ಮಧ್ಯೆ ಅದರ ಪಕ್ಕದಲ್ಲೇ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನ ಮೇಲೆ ಮರ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಗಂಭೀರ ಗಾಯಗೊಂಡ ಕೂಲಿ ಕಾರ್ಮಿಕನನ್ನು ತಕ್ಷಣ ಚಿಕಿತ್ಸೆಗೆ ದಾಖಲಿಸಲಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ. ಮೃತ ಕಾರ್ಮಿಕನು ಉತ್ತರ ಪ್ರದೇಶ ಮೂಲದ ವಿರೇಂದ್ರ ಎಂದು ಗುರುತಿಸಲಾಗಿದೆ.ಘಟನೆಯ ಬಳಿಕ ವಾರ್ಡ್ ಸದಸ್ಯರಾದ ಇಲ್ಯಾಸ್ ತೂಮಿನಾಡು ಅವರ ನೇತೃತ್ವದಲ್ಲಿ ಶವದ ಮಹಜರು ನಡೆಸಲಾಯಿತು. ನಂತರ ಮೃತ ದೇಹವನ್ನು ವಿಮಾನ ಮಾರ್ಗವಾಗಿ ಉತ್ತರ ಪ್ರದೇಶಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು.ಈ ದುರಂತದಿಂದ ಸ್ಥಳೀಯರಲ್ಲಿ ಶೋಕದ ವಾತಾವರಣ ಮೂಡಿದ್ದು, ಕೆಲಸದ ವೇಳೆ ಸುರಕ್ಷತಾ ಕ್ರಮಗಳ ಅಗತ್ಯತೆಯನ್ನು ಈ ಘಟನೆ ಮತ್ತೆ ನೆನಪಿಸಿದೆ.