ಮಂಗಳೂರು : ಬೆಳ್ತಂಗಡಿ ಸಮೀಪ ದೇವಸ್ಥಾನಕ್ಕೆಂದು ಹೊರಟು ಅಸಹಜವಾಗಿ ಸಾವನ್ನಪ್ಪಿದ ಓಡಿಲ್ನಳ ಗ್ರಾಮದ ಸಂಬೋಳ್ಯ ನಿವಾಸಿ ಬಾಲಕನ ಮೃತದೇಹದ ಮರಣೋತ್ತರ ಪರೀಕ್ಷೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಸಲಾಗಿದೆ.ಈ ವೇಳೆ ಬಾಲಕನ ತಲೆಗೆ ಮೂರು ಬಲವಾದ ಪೆಟ್ಟು ಬಿದ್ದಿರುವ ಗುರುತು ಕಂಡುಬಂದಿರುವುದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ಸಮಗ್ರ ತನಿಖೆ ಆರಂಭಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯ ಕುರಿತ ಮಾಹಿತಿಗಳು ಲಭ್ಯವಾಗುತ್ತಿದ್ದು, ಬಾಲಕನ ತಲೆಗೆ ಕತ್ತಿ ಅಥವಾ ಇನ್ಯಾವುದೋ ಆಯುಧದಿಂದ ಬಲವಾದ ಮೂರು ಹೊಡೆತಗಳು ಬಿದ್ದಿವೆ. ಅರೆಪ್ರಜ್ಞಾವಸ್ಥೆಯಲ್ಲಿ ಆತ ಕೆರೆಗೆ ಬಿದ್ದಿರುವ ಸಾಧ್ಯತೆಯಿದೆ ಎನ್ನಲಾಗಿದ್ದು, ಶ್ವಾಸಕೋಶದಲ್ಲಿ ನೀರು ತುಂಬಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಬಂದಿರುವುದಾಗಿ ತಿಳಿದು ಬಂದಿದೆ.
ಆದರೆ ತಲೆಯ ಮೇಲಿನ ಗಾಯಗಳ ಬಗ್ಗೆ ಸಮರ್ಪಕವಾದ ವಿವರಣೆ ದೊರಕಿಲ್ಲ. ಆದ್ದರಿಂದ ಸಮಗ್ರ ಹಾಗೂ ಸೂಕ್ಷ್ಮ ತನಿಖೆ ನಡೆಸುವ ಉದ್ದೇಶದಿಂದ ಈ ಅಸಹಜ ಸಾವು ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿ ತನಿಖೆ ನಡೆಸಲಾಗುತ್ತಿದೆ.ಈ ಪ್ರಕರಣದ ಸಮಗ್ರ ತನಿಖೆಗಾಗಿ ಬೆಳ್ತಂಗಡಿ ಡಿಎಸ್‌ಪಿ ರವರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ.ಎಂದು ಪೊಲೀಸರು ತಿಳಿಸಿದ್ದಾರೆ