ವಿದ್ಯಾರ್ಥಿಯು ಕೇವಲ ಅಧ್ಯಯನಕ್ಕೆ ಸೀಮಿತವಾಗಿರದೆ ಸಾಮಾಜಿಕ ಜೀವನದ ಆಗು-ಹೋಗುಗಳ ಬಗ್ಗೆ ಅರಿವಿರಬೇಕು. ಆಗ ಮಾತ್ರ ಅವನು ಸಂಘಜೀವಿಯಾಗಲು ಸಾಧ್ಯ ಎಂದು ಮಂಚಿ – ಕೊಳ್ನಾಡು ಸರಕಾರಿ ಪ್ರೌಢಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀ ಶಿವಶಂಕರ್ ರಾವ್ ನುಡಿದರು. ಇವರು ಶ್ರೀ ವೆಂಕಟರಮಣಸ್ವಾಮಿ ಕಾಲೇಜಿನ 2025-26 ನೇ ಸಾಲಿನ ಎನ್.ಎಸ್.ಎಸ್ ವಾರ್ಷಿಕ ಶಿಬಿರ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಯಾವುದೇ ವಿದ್ಯಾರ್ಥಿಗೆ ಶೈಕ್ಷಣಿಕ ಪ್ರಗತಿಯೊಂದಿಗೆ ನೈತಿಕ ಹಾಗೂ ಸಾಮಾಜಿಕ ಪ್ರಗತಿ ಅತಿಮುಖ್ಯ ಅದು ಶಾಲಾ – ಕಾಲೇಜುಗಳಿಗಿಂತ ಈ ರೀತಿಯ ಶಿಬಿರಗಳಿಂದ ದೊರಕುತ್ತದೆ. ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ವೆಂಕಟರಮಣಸ್ವಾಮಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎಂ.ಡಿ. ಮಂಚಿ ಕರೆ ನೀಡಿದರು.ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಾಸದ ಜೊತೆಗೆ ಸಾಮಾಜಿಕ ಜೀವನದ ತಿಳುವಳಿಕೆ ಉಂಟಾಗುತ್ತದೆ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಯಾದ ಕೊಳ್ನಾಡು – ಸಾಲೆತ್ತೂರಿನ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಉಮಾನಾಥ್ ರೈ ಮೇರಾವು ತಿಳಿಸಿದರು.
ಎನ್.ಎಸ್.ಎಸ್ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಯಾವಾಗಲೂ ಕ್ರೀಯಾಶೀಲರಾಗಿರುವಂತೆ ಮಾಡುತ್ತವೆ ಎಂದು ಮಂಚಿ ಸರಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ರಾಮ್ ಪ್ರಸಾದ್ ರೈ ತಿರುವಾಜೆ ನುಡಿದರು. ಗ್ರಾಮೀಣ ಜನರ ಜೀವನ ಶೈಲಿಯನ್ನು ತಿಳಿಯಬೇಕಾದುದು ನಗರ ಪ್ರದೇಶದ ವಿದ್ಯಾರ್ಥಿಗಳ ಕರ್ತವ್ಯವಾಗಿದೆ. ಶಿಬಿರದ ಅನುಕೂಲತೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಮಂಚಿ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ. ಸುಶೀಲ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಶ್ರೀ ವೆಂಕಟರಮಣಸ್ವಾಮಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀ ಶಿವಣ್ಣಪ್ರಭು ಎನ್.ಎಸ್.ಎಸ್ ಶಿಬಿರದ ಮಹತ್ವವನ್ನು ತಿಳಿಸಿದರು.
ವೇದಿಕೆಯಲ್ಲಿ ಸರಕಾರಿ ಪ್ರೌಢಶಾಲೆಯ ಶಿಕ್ಷಕರಾದ ತಾರಾನಾಥ ಕೈರಂಗಳ, ಎನ್.ಎಸ್.ಎಸ್. ಘಟಕ ನಾಯಕರಾದ ಕು.ಕರಿಷ್ಮಾ ಮತ್ತು ಅಮಿತ್ ಪ್ರಭು ಉಪಸ್ಥಿತರಿದ್ದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ. ಕಾಶೀನಾಥ ಶಾಸ್ತ್ರಿ ಸ್ವಾಗತಿಸಿ, ಪ್ರಾಧ್ಯಾಪಕಿ ಕು| ನಿರೀಕ್ಷಾ ವಂದಿಸಿದರು. ಉಪನ್ಯಾಸಕಿ ಕು. ಕಾವ್ಯ ನಿರೂಪಿಸಿದರು. ಕು. ಕರಿಷ್ಮಾ ಸಂಗಡಿಗರು ಪ್ರಾರ್ಥಿಸಿದರು.