ಎಲ್‌ಡಿಎಫ್ ಉತ್ತರ ವಲಯ ಜಾಥಾಗೆ ಕುಂಬಳೆಯಿಂದ ಚಾಲನೆ; ಕೇಂದ್ರದ ನಿರ್ಲಕ್ಷ್ಯ ವಿರುದ್ಧ ಸಿಎಂ ಪಿಣರಾಯಿ ವಿಜಯನ್ ವಾಗ್ದಾಳಿ:

ಕಾಸರಗೋಡು: ಸಿಪಿಐಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರ ಸಾರಥ್ಯದಲ್ಲಿ ನಡೆಯುವ ಎಲ್‌ಡಿಎಫ್ ಉತ್ತರ ವಲಯ ಜಾಥೆಗೆ ತುಳುನಾಡಿನ ನೆಲ ಕುಂಬಳೆಯಿಂದ ಆದಿತ್ಯವಾರ ಚಾಲನೆ ದೊರಕಿತು. ಜಾಥಾ ನಾಯಕ ಎಂ.ವಿ. ಗೋವಿಂದನ್ ಅವರಿಗೆ ಕೇರಳಾಭಿವೃದ್ಧಿಯ ಮಿನಿಯೇಚರ್ ನೀಡಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜಾಥಾವನ್ನು ಉದ್ಘಾಟಿಸಿದರು.

ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಕಳೆದ ಹತ್ತು ವರ್ಷಗಳ ಎಡರಂಗ ಸರ್ಕಾರದ ಸಾಧನೆಗಳನ್ನು ವಿವರಿಸಿ, ಕೇಂದ್ರ ಸರ್ಕಾರ ಕೇರಳದ ವಿರುದ್ಧ ತೋರಿಸುತ್ತಿರುವ ನಿರ್ಲಕ್ಷ್ಯ ಧೋರಣೆಯನ್ನು ತೀವ್ರವಾಗಿ ಟೀಕಿಸಿದರು. ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ಕೇರಳವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ರಾಜ್ಯದ ಮೇಲಿನ ಶತ್ರುತ್ವದ ಸ್ಪಷ್ಟ ಸಾಕ್ಷಿ ಎಂದು ಹೇಳಿದರು. ಏಮ್ಸ್, ಅತಿವೇಗ ರೈಲು ಹಳಿ, ವಿಳಿಂಞಂ ಬಂದರು ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಸೇರಿದಂತೆ ಕೇರಳದ ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ರಾಜ್ಯದ ವಿರುದ್ಧದ ದ್ರೋಹವಲ್ಲವೇ ಎಂದು ಪ್ರಶ್ನಿಸಿದರು.

ಹೊಸದುರ್ಗ ಶಾಸಕ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಹಾಗೂ ಕಾಸರಗೋಡಿನಲ್ಲಿ ಜಾಥೆಗೆ ಭಾರೀ ಸ್ವಾಗತ ದೊರಕಿತು. ಎಡರಂಗದ ಹಲವು ಪ್ರಮುಖ ನಾಯಕರು ಮತ್ತು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಜಾಥಾ ನಾಯಕ ಎಂ. ವಿ.ಗೋವಿಂದನ್ ಹಾಗೂ ಕೇರಳದ ಎಡರಂಗದ ಪ್ರಮುಖ ನಾಯಕರನ್ನು ಕುಂಬಳೆ ಸರ್ಕಲ್ ನಿಂದ ಬದಿಯಡ್ಕ ರಸ್ತೆಯಲ್ಲಿ ನಿರ್ಮಿಸಿದ ವೇದಿಕೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಈ ವೇಳೆ ನೂರಾರು ಎಡರಂಗದ ಕಾರ್ಯಕರ್ತರು ತುಳುನಾಡಿನ ಮಣ್ಣಿಗೆ ಸ್ವಾಗತ ಕೋರಿ ಆವೇಶ ಭರಿತ ಅಭಿವಂದನೆ ಸಲ್ಲಿಸಿದರು.

ಶಾಸಕ ಕೆ. ಪಿ. ಸತೀಶ್ಚಂದ್ರನ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸಿಪಿಎಂ ನಾಯಕ ಕೆ. ಎಸ್ ಸಲೀಮ್‌, ಸಂಸದ ಪಿ. ಸಂತೋಷ್ ಕುಮಾರ್, ಕೇರಳಾ ಕಾಂಗ್ರೆಸಿನ ಮ್ಯಾಥ್ಯ ಕುನ್ನಪಳ್ಳಿ, ಸೋಷ್ಯಲಿಸ್ಟ್ ಜನತಾದಳ ನಾಯಕ ಪಿ. ಪಿ. ದಿವಾಕರನ್, ಕೇರಳ ಎನ್ ಸಿ ಪಿ ನಾಯಕ ಪಿಎಂ ಸುರೇಶ್ ಬಾಬು, ಆರ್ ಜೆ ಡಿ ನಾಯಕ ಮನಯತ್ ಚಂದ್ರನ್, ಕಾಂಗ್ರೆಸ್ ಎಸ್ ನಾಯಕ ಬಾಬು ಗೋಪಿನಾಥ್, ಕೇರಳ ಕಾಂಗ್ರೆಸ್ ಬಿ ಬಣದ ವಡಕ್ಕೋಡ್ ಮೋನಚ್ಚನ್, ಪ್ರಜಾವಾದಿ ಕೇರಳ ಕಾಂಗ್ರೆಸ್ ನ ಎ. ಜೆ. ಜೋಸೆಫ್, ಐಎನ್ ಎಲ್ ನಾಯಕ ಖಾಸಿಂ ಇರಿಕ್ಕೂರ್ ಹಾಗೂ ಜಿಲ್ಲೆಯ ಶಾಸಕರಾದ ಸಿಎಚ್ ಕುಂಞಂಬು, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ರಾಜಗೋಪಾಲನ್, ಮಾಜಿ ಸಂಸದ ಪಿ. ಕರುಣಾಕರನ್ ಸೇರಿದಂತೆ ಪ್ರಮುಖ ನಾಯಕರು ವೇದಿಕೆಯಲ್ಲಿದ್ದರು.

ತುಳುನಾಡಿನ ಕಲಾ ಸಂಸ್ಕೃತಿಯ ದ್ಯೋತಕವಾದ ಯಕ್ಷಗಾನದ ಸ್ಮರಣಿಕೆ ನೀಡಿ ಮೈಸೂರು ಪೇಟ ತೊಡಿಸಿ, ಶಾಲು ಹಾಕಿ ಉತ್ತರ ವಲಯ ಜಾಥಾ ಸಂಘಟಕ ಸಮಿತಿ ಸಂಚಾಲಕ ಕೆ. ಆರ್. ಜಯಾನಂದ ಮುಖ್ಯಮಂತ್ರಿಗಳನ್ನು ಸ್ವಾಗತಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!