ಮಂಜೇಶ್ವರ: ಮಂಜೇಶ್ವರ ತೂಮಿನಾಡು ಹಿಲ್‌ಟಾಪ್‌ನಲ್ಲಿ ದಾಂಪತ್ಯ ವೈಮನಸ್ಸು ಹಾಗೂ ಸೊತ್ತು ವಿಚಾರದ ಕಲಹದಿಂದ ಸಂಭವಿಸಿದ ದ್ವಿಕೋಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಉಮ್ಮರ್‌ನನ್ನು ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಕರೆತಂದು ಮಹಜರ್ ನಡೆಸಿ ಸಾಕ್ಷ್ಯ ಸಂಗ್ರಹಿಸಿದರು. ತನಿಖೆಯ ಭಾಗವಾಗಿ ಆರೋಪಿಯಿಂದ ಘಟನೆಯ ಪುನರ್ ನಿರ್ಮಾಣ ಮಾಡಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಶೇಕುಂಞ ಅವರ ಮನೆಯಲ್ಲಿ ನಡೆದ ಹಲ್ಲೆಯ ವೇಳೆ ಜುಮ್ಲಾ ತಂದೆಯ ಇರಿತಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಶೇಕುಂಞ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಬಳಿಕ ಸಾವನ್ನಪ್ಪಿದರು.
ಘಟನಾ ಸ್ಥಳದಲ್ಲಿ ಫೊರೆನ್ಸಿಕ್ ತಂಡದ ಸಹಾಯದಿಂದ ಅಗತ್ಯ ದಾಖಲೆಗಳು ಹಾಗೂ ಭೌತಿಕ ಸಾಕ್ಷ್ಯಗಳನ್ನು ಸಂಗ್ರಹಿಸಲಾಯಿತು. ಪ್ರಕರಣದ ಹಿನ್ನೆಲೆ, ನಿಖರ ಕಾರಣಗಳು ಮತ್ತು ಇತರರ ಪಾತ್ರವಿದೆಯೇ ಎಂಬುದರ ಕುರಿತು ಪೊಲೀಸರು ಸವಿಸ್ತಾರ ತನಿಖೆ ಮುಂದುವರಿಸಿದ್ದಾರೆ.
ಈ ದ್ವಿಕೋಲೆ ಪ್ರಕರಣವು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ