ಕಾಸರಗೋಡು: ಮಾದಕದ್ರವ್ಯ ಮಾರಾಟ ಹಾಗೂ ಹಣಕಾಸು ವಂಚನೆಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್ ಖಾತೆಗಳನ್ನು ತೆರೆಯುತ್ತಿದ್ದ ಜಾಲದ ಪ್ರಮುಖರನ್ನು ತಲಕ್ಕೇರಿ ಎಎಸ್ಪಿ ಡಾ. ಎಂ. ನಂದಕುಮಾರ್ ನೇತೃತ್ವದ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಕಾಸರಗೋಡು ಮೊಗ್ರಾಲ್ನ ಅಬ್ದುಲ್ ರಹ್ಮಾನ್ (36) ಹಾಗೂ ಎರ್ನಾಕುಳಂನ ಕೆ.ಎಂ. ರಿಶಾದ್ (41) ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ನೂರಾರು ಆಧಾರ್ ಕಾರ್ಡ್ಗಳು, ಪಾನ್ಕಾರ್ಡ್ಗಳು, ನಕಲಿ ಸರ್ಟಿಫಿಕೇಟ್ಗಳು, ಸಿಮ್ ಕಾರ್ಡ್ಗಳು ಮತ್ತು ಬ್ಯಾಂಕ್ ಪಾಸ್ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಾವನ್ನಪ್ಪಿದವರು ಮತ್ತು ಬೀದಿ ಬದಿಯಲ್ಲಿ ತಿರುಗಾಡುವವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ದೆಹಲಿಯಿಂದ ಎಂಡಿಎಂಎ ಸೇರಿದಂತೆ ವಿವಿಧ ಮಾದಕವಸ್ತುಗಳನ್ನು ಸಾಗಾಟ ಮಾಡಲು ಈ ಜಾಲ ಬಳಸಿಕೊಳ್ಳುತ್ತಿದ್ದ ಬಗ್ಗೆ ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.

