ಮಂಜೇಶ್ವರ : ಕೇಂದ್ರ ಸರ್ಕಾರದ ನೂತನ ಲೇಬರ್ ಕೋಡ್ ಹಿಂಪಡೆಯುವಂತೆ ಹಾಗೂ ಕೃಷಿ-ಕಾರ್ಮಿಕ, ಆರ್ಥಿಕ ನೀತಿಗಳ ವಿರುದ್ಧ ದೇಶವ್ಯಾಪಿ ಕರೆ ನೀಡಲಾದ ಭಾರತ್ ಬಂದ್ಗೆ ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಜಿಲ್ಲೆಯಾದ್ಯಂತ ವಾಣಿಜ್ಯ ವಹಿವಾಟು ಹಾಗೂ ಸಾರಿಗೆ ವ್ಯವಸ್ಥೆ ಬಹುತೇಕ ಸ್ಥಗಿತಗೊಂಡು ಸಾಮಾನ್ಯ ಜನಜೀವನಕ್ಕೆ ವ್ಯತ್ಯಯ ಉಂಟಾಯಿತು.
ನಗರ ಸೇರಿದಂತೆ ವಿವಿಧ ಪಟ್ಟಣ-ಪೇಟೆಗಳಲ್ಲಿ ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ಅಗತ್ಯ ಸೇವೆಗಳಾದ ಔಷಧ ಅಂಗಡಿ ಮತ್ತು ಹಾಲು ಮಾರಾಟ ಕೇಂದ್ರಗಳು ಮಾತ್ರ ಕೆಲವೆಡೆ ತೆರೆಯಲ್ಪಟ್ಟವು. ಮಂಜೇಶ್ವರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಬಂದ್ನ ಪರಿಣಾಮ ತೀರ ಕಡಿಮೆಯಾಗಿತ್ತು.ರಾಜ್ಯದಲ್ಲಿ ಮಧ್ಯರಾತ್ರಿಯಿಂದಲೇ ಮುಷ್ಕರ ಆರಂಭಗೊಂಡಿದ್ದು, ಸಿಐಟಿಯು, ಐಎನ್ಟಿಯುಸಿ ಸೇರಿ ಹಲವು ಟ್ರೇಡ್ ಯೂನಿಯನ್ಗಳು ಬೆಂಬಲ ಸೂಚಿಸಿವೆ. ಕಾಸರಗೋಡಿನಲ್ಲಿ ಸಂಯುಕ್ತ ಟ್ರೇಡ್ ಯೂನಿಯನ್ಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ನೀತಿಯನ್ನು ಖಂಡಿಸಿವೆ.