ತಲಪಾಡಿ ಟೋಲ್‌ಗೇಟ್‌ನಲ್ಲಿ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ವಾಹನಗಳಿಗೆ ಉಚಿತ ಪಾಸಿಂಗ್ (ಫ್ರೀ ಪಾಸ್) ನೀಡುವಂತೆ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಿದೆ. ತಲಪಾಡಿ ಟೋಲ್‌ನಲ್ಲಿ ತಲಪಾಡಿ ಗ್ರಾಮದ ವಾಹನಗಳಿಗೆ ನೀಡಿರುವಂತೆ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ವಾಹನಗಳಿಗೂ ಫ್ರೀ ಪಾಸಿಂಗ್ ಸೌಲಭ್ಯ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಈ ಕುರಿತು ಮಾತನಾಡಿದ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., “ಈ ವಿಷಯದಲ್ಲಿ ಮಂಜೇಶ್ವರ ಶಾಸಕರಾಗಲಿ ಅಥವಾ ಸಂಸದರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಜನರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಈ ವಿಚಾರವನ್ನು ಮುಂದಿಟ್ಟಿದ್ದು, ತಲಪಾಡಿ ಟೋಲ್ ಕರ್ನಾಟಕದ ಪ್ರಾದೇಶಿಕ ವ್ಯಾಪ್ತಿಗೆ ಬರುತ್ತಿರುವ ಕಾರಣ ಮಂಗಳೂರು ಸಂಸದರ ಮೂಲಕ ಹೆದ್ದಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ” ಎಂದು ಹೇಳಿದರು.
ಮನವಿಗೆ ಸ್ಪಂದಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಹೆದ್ದಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ರೈ, ಯತೀಶ್ ಭಂಡಾರಿ, ಕಾರ್ತಿಕ್ ಶೆಟ್ಟಿ, ನ್ಯಾ. ನವೀನ್ ರಾಜ್, ಆಶಾಲತಾ ಬಿ.ಎಂ. ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.